ಮಂಗಳೂರು, ಫೆ. 18 (DaijiworldNews/AA): ಮಂಗಳೂರಿನ ಖ್ಯಾತ ಉದ್ಯಮಿ ಹಾಗೂ ಶ್ರೀನಿವಾಸ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿ.ಎ. ಎ. ರಾಘವೇಂದ್ರ ರಾವ್ ಅವರ ನಿಧನಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಗಳೂರಿನಲ್ಲಿ ಶ್ರೀನಿವಾಸ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿದ್ದ ರಾಘವೇಂದ್ರ ರಾವ್ ಅವರ ನಿಧನವು ತುಂಬಲಾರದ ನಷ್ಟವಾಗಿದೆ. 80ರ ದಶಕದಲ್ಲೇ ಮಂಗಳೂರಿನಲ್ಲಿ ತ್ರಿ-ಸ್ಟಾರ್ ಹೋಟೆಲ್ನ್ನು ಆರಂಭಿಸಿ ನಗರದ ಸಮಗ್ರ ಬೆಳವಣಿಗೆಗೆ ಅನನ್ಯ ಕೊಡುಗೆ ನೀಡಿರುವ ಅವರ ದೂರದೃಷ್ಟಿ ಚಿಂತನೆ ಹಾಗೂ ಉದ್ಯಮ ಕ್ಷೇತ್ರದ ಯಶಸ್ವಿ ಪಯಣ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಅವರು ಕೇವಲ ಒಬ್ಬ ಯಶಸ್ವಿ ಉದ್ಯಮಿಯಾಗಿ ಮಾತ್ರವಲ್ಲದೆ, ನೂರಾರು ಕುಟುಂಬಗಳಿಗೆ ಉದ್ಯೋಗದಾತರಾಗಿ ಸಲ್ಲಿಸಿದ ಸೇವೆ ಸ್ಮರಣೀಯವಾದುದು. ಅದರಲ್ಲೂ ವಿಶೇಷವಾಗಿ, ಹಿಂದೂ ಸಮಾಜದ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಅವರು ಸದಾ ಬೆಂಬಲವಾಗಿ ನಿಲ್ಲುತ್ತಿದ್ದರು. ಸಮಾಜದ ಹಿತದೃಷ್ಟಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅನನ್ಯವಾದುದು ಎಂದು ತಿಳಿಸಿದ್ದಾರೆ.
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಮತ್ತು ಶ್ರೀನಿವಾಸ ಸಂಸ್ಥೆಯ ಸಿಬ್ಬಂದಿ ವರ್ಗಕ್ಕೆ ಕರುಣಿಸಲಿ" ಎಂದು ಪ್ರಾರ್ಥಿಸಿದ್ದಾರೆ.