ಕಾಸರಗೋಡು, ಫೆ. 18 (DaijiworldNews/ AK): ಬೈಕ್ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 24 ವರ್ಷದ ಸವಾರ ಸಾವನ್ನಪ್ಪಿದ್ದು, ಅವರ ಸ್ನೇಹಿತ ಗಂಭೀರವಾಗಿ ಗಾಯಗೊಂಡ ಘಟನೆ ಬಂದ್ಯೋಡು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಮೃತರನ್ನು ಸುಳ್ಯದ ಪದಡ್ಕದಲ್ಲಿರುವ ಆನೆಕಲ್ಲು ನಿವಾಸಿ ನಿರಂಜನ್ ಕೆ (24) ಎಂದು ಗುರುತಿಸಲಾಗಿದ್ದು, ಅವರ ಸ್ನೇಹಿತ ಮಂಗಳೂರಿನ ಶಕ್ತಿನಗರದ ಕೃತಿಕ್ ಬೆನ್ನಿ (23) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಇಬ್ಬರು ಕೇರಳ ಪ್ರವಾಸದ ನಂತರ ಮಂಗಳೂರಿಗೆ ಹಿಂತಿರುಗುತ್ತಿದ್ದ ಐದು ಬೈಕ್ ಸವಾರರ ಗುಂಪಿನ ಭಾಗವಾಗಿದ್ದರು ಎನ್ನಲಾಗಿದೆ.
ಬಂದ್ಯೋಡು ಬಳಿಯ ಸರ್ವಿಸ್ ರಸ್ತೆಯಲ್ಲಿ ಕೋಳಿ ಸಾಗಿಸುತ್ತಿದ್ದ ಪಿಕಪ್ ವಾಹನಕ್ಕೆ ಎರಡುಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಇಬ್ಬರೂ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.