ಸುಳ್ಯ, ಫೆ. 16 (DaijiworldNews/AA): ಪೆರಾಜೆ ಸಮೀಪದ ಕುಕ್ಕುಂಬಳ ಸೇತುವೆಯ ಮೇಲೆ ಚಲಿಸುತ್ತಿದ್ದ ಸ್ಕೂಟರ್ ಸವಾರರೊಬ್ಬರು ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಫೆಬ್ರವರಿ 14ರ ಶನಿವಾರ ರಾತ್ರಿ ನಡೆದಿದೆ. ಗಾಯಾಳು ಸವಾರನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡವರನ್ನು ಅಂಜಿಕ್ಕಾರ್ ಸುಂದರ ನಾಯ್ಕ ಎಂಬವರ ಪುತ್ರ ರವಿಚಂದ್ರ ನಾಯ್ಕ ಎಂದು ಗುರುತಿಸಲಾಗಿದೆ. ಇವರು ಸುಳ್ಯದಿಂದ ಮನೆಗೆ ಹಿಂತಿರುಗುತ್ತಿದ್ದಾಗ ರಾತ್ರಿ 8 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಈ ಹಿಂದೆ ಕೂಡ ಇದೇ ಸ್ಥಳದಲ್ಲಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದಿತ್ತು. ಸೇತುವೆಗೆ ಯಾವುದೇ ಸುರಕ್ಷಿತ ತಡೆಗೋಡೆ ಅಥವಾ ಬ್ಯಾರಿಕೇಡ್ಗಳಿಲ್ಲದಿರುವುದೇ ಇಂತಹ ಸರಣಿ ಅಪಘಾತಗಳಿಗೆ ಮುಖ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮತ್ತೊಂದು ಅಪಘಾತ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ಸೇತುವೆಗೆ ತಡೆಗೋಡೆ ನಿರ್ಮಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.