ಬೆಳ್ತಂಗಡಿ,ಫೆ. 15 (DaijiworldNews/AK): ತಿಥಿ ಕಾರ್ಯಕ್ರಮಕ್ಕೆ ಪದಾರ್ಥ ಮಾಡಿ ಬಡಿಸಲು ಅಜ್ಜಿಗೆ ಇಷ್ಟವಾದ ಆಮೆಯನ್ನು ಸಂಬಂಧಿಕರು ನದಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮಾಂಸ ಮಾಡಲು ಪ್ರಯತ್ನಿಸುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ನಾಲ್ಕು ಆಮೆ ಸಮೇತ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ ನಗರದ ಸೋಮವತಿ ನದಿಯಲ್ಲಿ ಅಕ್ರಮವಾಗಿ ನಾಲ್ಕು ಆಮೆಯನ್ನು ಬೇಟೆಯಾಡಿ ನದಿ ಬದಿಯಲ್ಲಿ ಮಾಂಸ ಮಾಡಲು ಪ್ರಯತ್ನಿಸುತ್ತಿರುವಾಗ ಫೆ.14 ರಂದು ಸಂಜೆ 3:30 ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್.ಎಮ್ ನೇತೃತ್ವದ ತಂಡ ದಾಳಿ ಮಾಡಿ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ನಾಲ್ಕು ಸುಟ್ಟ ಆಮೆಯನ್ನು ಜಪ್ತಿ ಮಾಡಿ ಮುಂದಿನ ತನಿಖೆಗಾಗಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್ ನೀಡಿ ಫೆ.14 ರಂದು ರಾತ್ರಿ ಬಿಡುಗಡೆ ಮಾಡಲಾಗಿದೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ಬೆಳ್ತಂಗಡಿ ಇನ್ಸ್ಪೆಕ್ಟರ್ ಬಿ.ಜಿ.ಸುಬ್ಬಾಪುರ ಮಠ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್.ಎಮ್ ನೇತೃತ್ವದ ಸಿಬ್ಬಂದಿ ಎಎಸ್ಐ ಕುಶಾಲಪ್ಪ, ಹೆಡ್ ಕಾನ್ಸ್ಟೇಬಲ್ ಪ್ರಮೋದ್, ಪಂಪಾಪತಿ, ಪ್ರಕಾಶ್, ಶ್ವೇತಾ, ಸವಿತಾ ಹಾಗೂ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಡಿ.ಆರ್.ಎಫ್.ಒ ಕಿರಣ್ ಪಾಟೀಲ್, ಸಂದೀಪ್, ಬೀಟ್ ಫಾರೆಸ್ಟರ್ ಪರಶುರಾಮ ಮೇಟಿ, ದಿವಾಕರ್ ಹಾಗೂ ವಾಹನ ಚಾಲಕ ಕುಶಾಲಪ್ಪ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.