ಮಂಗಳೂರು, ಫೆ. 13 (DaijiworldNews/AK): ನಗರದ ಲಯನ್ಸ್ ಕ್ಲಬ್ ವೆಲೆನ್ಸಿಯಾ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಸಿ.ಓ.ಡಿ.ಪಿ (CODP) ಸಂಸ್ಥೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂಧರ ವಿಶೇಷ ಕ್ರಿಕೆಟ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ಜರುಗಿತು.

ಈ ರೋಚಕ ಪಂದ್ಯಾವಳಿಯಲ್ಲಿ ಶಿವಮೊಗ್ಗ ತಂಡವು ಬೆಂಗಳೂರು ತಂಡವನ್ನು ಫೈನಲ್ನಲ್ಲಿ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು. ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಅಂಧರಲ್ಲಿ ಕ್ರೀಡಾ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ವೆಲೆನ್ಸಿಯಾ ಮತ್ತು ಸಿ.ಓ.ಡಿ.ಪಿ ಈ ಅರ್ಥಪೂರ್ಣ ಕ್ರೀಡಾಕೂಟವನ್ನು ಸಂಘಟಿಸಿದ್ದವು.
ಫೈನಲ್ ಪಂದ್ಯದ ಹೈಲೈಟ್ಸ್:
ಅಂತಿಮ ಹಣಾಹಣಿಯಲ್ಲಿ ಶಿವಮೊಗ್ಗ ಮತ್ತು ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಶಿವಮೊಗ್ಗ ತಂಡವು ಮೊದಲು ಬ್ಯಾಟಿಂಗ್ ನಡೆಸಿ 8 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 73 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಅದನ್ನು ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 8 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಈ ಮೂಲಕ ಶಿವಮೊಗ್ಗ ತಂಡವು ಭರ್ಜರಿ ಜಯ ಸಾಧಿಸಿ ವಿಜೇತರಾಗಿ ಹೊರಹೊಮ್ಮಿತು.
ಟೂರ್ನಿಯ ಫಲಿತಾಂಶಗಳು:
ಟೂರ್ನಿಯಲ್ಲಿ ಒಟ್ಟು 7 ಪಂದ್ಯಗಳು ನಡೆದವು. ಇದರಲ್ಲಿ ಶಿವಮೊಗ್ಗ ತಂಡವು ತನ್ನೆಲ್ಲಾ ಪಂದ್ಯಗಳಲ್ಲಿ ಅಜೇಯವಾಗಿ ಉಳಿಯುವ ಮೂಲಕ ಗಮನ ಸೆಳೆಯಿತು. ಫೈನಲ್ನಲ್ಲಿ ಶಿವಮೊಗ್ಗ , ಬೆಂಗಳೂರು ನಡುವಿನ ಪಂದ್ಯದಲ್ಲಿ ಶಿವಮೊಗ್ಗ (73/1, 8 ಓವರ್) ಬೆಂಗಳೂರು (60/4, 8 ಓವರ್) ಪಡೆಯಿತು. ಶಿವಮೊಗ್ಗ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಾದ ಅತ್ಯುತ್ತಮ ಬ್ಯಾಟ್ಸ್ಮನ್: ವಿನಯ್ ಕುಮಾರ್ (ಶಿವಮೊಗ್ಗ ತಂಡ) ಅತ್ಯುತ್ತಮ ಬೌಲರ್- ಮಾದೇಶ್ (ಬೆಂಗಳೂರು ತಂಡ).
ಈ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಆಶಾಕಿರಣ ಅಂಧರ ಶಾಲೆ ಮತ್ತು ಬೆಂಗಳೂರಿನ ದೀಪ ಅಕಾಡೆಮಿ ತಂಡಗಳು ಪಾಲ್ಗೊಂಡು ತಮ್ಮ ಅದ್ಭುತ ಕೌಶಲ್ಯವನ್ನು ಪ್ರದರ್ಶಿಸಿದವು. ಅಂಧ ಆಟಗಾರರ ಈ ಸಾಧನೆಯನ್ನು ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸಿ.ಓ.ಡಿ.ಪಿ ನಿರ್ದೇಶಕರು ಶ್ಲಾಘಿಸಿದರು.