ಉಡುಪಿ, ಫೆ. 09 (DaijiworldNews/AA): ಆಟೋ ರಿಕ್ಷಾ ಚಾಲಕರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಮಣಿಪಾಲದ ದಶರಥನಗರದ ಅಂಗಡಿಯೊಂದರ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ದಾವಣಗೆರೆ ಮೂಲದ ಮಂಜುನಾಥ್ ಕಾಮತ್ (45) ಮೃತಪಟ್ಟ ಆಟೋ ಚಾಲಕ ಎಂದು ಗುರುತಿಸಲಾಗಿದೆ.
ಈ ಘಟನೆಯು ಸುಮಾರು ನಾಲ್ಕು ದಿನಗಳ ಹಿಂದೆಯೇ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹ ಕೊಳೆತು ಹೋಗಿ ದುರ್ವಾಸನೆ ಬರಲಾರಂಭಿಸಿದಾಗ ಸಾರ್ವಜನಿಕರಿಗೆ ವಿಷಯ ತಿಳಿದುಬಂದಿದೆ.
ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ವಾಮನ ಮತ್ತು ಅಧಿಕಾರಿ ಶ್ರವಣ್ ಅವರು ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕ್ರಿಯೆಗಳನ್ನು ನಡೆಸಿದ್ದಾರೆ. ಸ್ಥಳಕ್ಕೆ ಮಣಿಪಾಲದ ವಿಧಿವಿಜ್ಞಾನ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಕೆಳಕ್ಕೆ ಇಳಿಸಿ, ಹೆಚ್ಚಿನ ತಪಾಸಣೆಗಾಗಿ ಮಣಿಪಾಲದ ಕೆಎಂಸಿ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.