ಬೆಳ್ತಂಗಡಿ, ಫೆ. 09 (DaijiworldNews/AK): ಅಪ್ರಾಪ್ತ ವಯಸ್ಕ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿದ ಘಟನೆ ವರದಿಯಾಗಿದ್ದು, ಮೂವರು ಅಪರಿಚಿತ ವ್ಯಕ್ತಿಗಳು ಬಾಲಕಿಯನ್ನು ಅಪಹರಿಸಲು ಯತ್ನಿಸಿ, ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ಬೆಳ್ತಂಗಡಿಯಲ್ಲಿ ವರದಿಯಾಗಿದೆ.

ಫೆಬ್ರವರಿ 9 ರ ಬೆಳಿಗ್ಗೆ 8.30 ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಳ್ತಂಗಡಿ ನಗರದ ಸುದೇಮುಗೇರು ನಿವಾಸಿ ಹಾಗೂ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿ ಕಾಲೇಜಿಗೆ ಬಸ್ ಹಿಡಿಯಲು ಸಂತೆಕಟ್ಟೆ ಕಡೆಗೆ ಸ್ಕೂಟರ್ನಲ್ಲಿ ಹೋಗುತ್ತಿದ್ದಳು. ಆ ಸಮಯದಲ್ಲಿ, ಮೂವರು ದುಷ್ಕರ್ಮಿಗಳು ಬಟ್ಟೆಯಿಂದ ಮುಚ್ಚಿದ ನಂಬರ್ ಪ್ಲೇಟ್ ಹೊಂದಿದ್ದ ಕಾರಿನಲ್ಲಿ ಬಂದು ಆಕೆಯ ಸ್ಕೂಟರ್ ಅನ್ನು ಅಡ್ಡಗಟ್ಟಿ, ಬಲವಂತವಾಗಿ ವಾಹನಕ್ಕೆ ಎಳೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಬಾಲಕಿ ಕೂಗಿ ಬಲವಾಗಿ ವಿರೋಧಿಸಿ ತಪ್ಪಿಸಿಕೊಂಡಿದ್ದಾಳೆ. ಹಿಂದಿನಿಂದ ಮತ್ತೊಂದು ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು,ಬಾಲಕಿಯ ಕೈ ಮತ್ತು ಬೆರಳುಗಳಿಗೆ ಚಾಕುವಿನಿಂದ ಇರಿದು ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ.