ಉಳ್ಳಾಲ, ಫೆ. 08 (DaijiworldNews/AA): ದೇರಳಕಟ್ಟೆಯ ದೆ ಮೆರ್ಸಿದೆ ಮಕ್ಕಳ ಆಶ್ರಮಕ್ಕೆ ಮಂಗಳೂರು ತಾಲೂಕು ಧ್ವನಿ ಮತ್ತು ಬೆಳಕು ಮಾಲಕರ ಸಂಘದ ವತಿಯಿಂದ ಸುಮಾರು 1.50 ಲಕ್ಷ ರೂ. ಮೌಲ್ಯದ 60 ಫ್ಯಾನ್ಗಳನ್ನು ಕೊಡುಗೆಯಾಗಿ ನೀಡಲಾಯಿತು. ಇದೇ ಸಂದರ್ಭ ಸುಮಾರು 100 ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.





ಸಿಸ್ಟರ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೂಸಿ ಪಿಂಟೊ ಅವರು ಮಾತನಾಡಿ, ಬಿಸಿಲ ಬೇಗೆಗೆ ಮಕ್ಕಳಿಗೆ ಕೊಂಚ ಸಮಸ್ಯೆಯಾಗುತ್ತಿತ್ತು. ಆದರೆ ಇಂದು ತಣ್ಣಗಾಗುವ ನಿಟ್ಟಿನಲ್ಲಿ ಫ್ಯಾನ್ಗಳನ್ನು ಧ್ವನಿ ಮತ್ತು ಬೆಳಕು ಮಾಲಕರ ಸಂಘ ನೀಡಿದ್ದಾರೆ. ಇದರ ಜೊತೆಗೆ ಮಕ್ಕಳ ಹುಟ್ಟುಹಬ್ಬವನ್ನು ಸಿಹಿತಿಂಡಿಗಳನ್ನು ಹಂಚುವ ಮೂಲಕ ಆಚರಿಸಿಕೊಂಡಿದ್ದು, ಇವರ ಈ ಸೇವೆ ಇನ್ನಷ್ಟು ಮುಂದುವರೆಯಲಿ ಎಂದು ಶುಭಹಾರೈಸಿದ್ರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಬೆನೆಟ್ ಡಿಸಿಲ್ವ ಅವರು, "ಸಂಘದ ವತಿಯಿಂದ ಸುಮಾರು 60 ಫ್ಯಾನ್ಗಳನ್ನು ನೀಡಿದ್ದೇವೆ. ಇದರ ಜೊತೆಗೆ ಅಂದಾಜು 100 ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಿದ್ದು, ಊಟದ ವ್ಯವಸ್ಥೆಯನ್ನು ಸಂಘದ ಮೂಲಕ ಮಾಡಿದ್ದೇವೆ. ಸಂಘದ ಸದಸ್ಯರು ಹಾಗೂ ಕಾರ್ಯಕಾರಿಣಿ ಸದಸ್ಯರ ಸಹಕಾರದಿಂದ ಈ ಮುಗ್ದ ಮಕ್ಕಳಿಗಾಗಿ ಇಂತಹದೊಂದು ವ್ಯವಸ್ಥೆಯನ್ನು ಕಲ್ಪಿಸಲಾಯಿತು" ಎಂದು ಶ್ಲಾಘಿಸಿದರು.
ಇನ್ನು ದೆ ಮೆರ್ಸಿದೆ ಮಕ್ಕಳ ಆಶ್ರಮದ ಸಿಸ್ಟರ್ ಲೀಡಿಯಾ ಅವರು ಮಾತನಾಡಿ, ಇಲ್ಲಿ ಕಲಿತು, ಬೆಳೆದ ಮಕ್ಕಳು ಮುಂದೆ ಸಮಾಜದಲ್ಲಿ ತಮ್ಮಂತಹ ನೂರಾರು ಮಕ್ಕಳಿಗೆ ದಾರಿ ದೀಪವಾಗಬೇಕು ಎನ್ನುತ್ತಾ ಒಂದು ಇಸ್ಲಾಂ ಮಹಿಳೆಯ ಜೀವನದ ಘಟನೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳು ಕುಣಿದು, ಕುಪ್ಪಳಿಸಿದರು. ಮಂಗಳೂರು ತಾಲೂಕು ಧ್ವನಿ ಮತ್ತು ಬೆಳಕು ಮಾಲಕರ ಸಂಘದ ಅಧ್ಯಕ್ಷರು ರಸಪ್ರಶ್ನೆ ಹಾಗು ಇನ್ನಿತರ ಚಟುವಟಿಕೆಗಳನ್ನು ಮಕ್ಕಳಿಗೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬೆನೆಟ್ ಡಿಸಿಲ್ವ, ಉಪಾಧ್ಯಕ್ಷ ವಿನೋದ್ ಕುಂಪಲ ಕಾರ್ಯದರ್ಶಿ ಕೆ. ನಿತ್ಯಾನಂದ, ಹಾಗೂ ಸದಸ್ಯರಾದ ಅರುಣ್ ನೊರೊನ್ನಾ, ಸಂದೀಪ್ ಡಿಸಿಲ್ವ, ಸಂದೀಪ್ ಉಳ್ಳಾಳ್, ರಾಜೇಶ್, ಮಾಕ್ಸಿಮ್, ರವಿ, ವಿಜಿತ್, ರಂಜನ್, ಯಶ್ಪಾಲ್, ಗಣೇಶ್ ಎ ಉಪಸ್ಥಿತರಿದ್ದರು.
ದೆ ಮೆರ್ಸಿದೆ ಮಕ್ಕಳ ಆಶ್ರಮದ ಸಿಸ್ಟರ್ ಲೀಡಿಯಾ, ಪ್ಲಾವಿಯಾ, ಲೂಸಿ ಪಿಂಟೊ, ಟ್ರಿಝಾ, ರೆನಿಟ, ಆರೋಗ್ಯ, ಸುನಿತ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಿಶೆಲ್ ನೆರವೇರಿಸಿದರು. ರಕ್ಷಿತಾ ಧನ್ಯವಾದ ಸಲ್ಲಿಸಿದರು.