ವಿಟ್ಲ, ಫೆ. 08 (DaijiworldNews/TA): ವಿಟ್ಲ ಬಸ್ಸ್ಟ್ಯಾಂಡ್ ಸಮೀಪ ಪುತ್ತೂರು ಕಡೆಯಿಂದ ಬರುತ್ತಿದ್ದ ಬೈಕ್ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.

ಡಿಕ್ಕಿಯಿಂದ ಗಾಯಗೊಂಡ ಮಹಿಳೆಯನ್ನು ವಿಟ್ಲ ಮುಡ್ನೂರು ಗ್ರಾಮದ ಮರುವಾಳ ನಿವಾಸಿ ಸೀತಾ ಶೆಟ್ಟಿ (68) ಎಂದು ಗುರುತಿಸಲಾಗಿದೆ. ತೀವ್ರ ಗಾಯಗಳಿಂದಾಗಿ ಅವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಬೈಕ್ ಸವಾರನು ಪುತ್ತೂರು ಮೂಲದವರು ಎಂದು ತಿಳಿದು ಬಂದಿದೆ. ಅಪಘಾತದ ನಂತರ ಬೈಕ್ ಸುಮಾರು 50 ಮೀಟರ್ ದೂರ ರಸ್ತೆಯಲ್ಲಿ ಎಳೆಯುತ್ತ ಹೋಗಿ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಲ್ಲಿಯೇ ಇದ್ದವರು ತಮ್ಮ ದ್ವಿಚಕ್ರ ವಾಹನದಲ್ಲಿ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಮೃತ ಸೀತಾ ಶೆಟ್ಟಿ ಅವರು ಓರ್ವ ಪುತ್ರ ರೂಪೇಶ್ ಹಾಗೂ ಪುತ್ರಿ ರೂಪಿತ ರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.