ಬಂಟ್ವಾಳ, ಫೆ. 08 (DaijiworldNews/TA): ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಸ್ಟಿ ಪ್ರದೇಶದ ಹಿಂದೂ ಮೆಡಂಗಿ ಜೋಶಿ ಸಮಾಜದ ಭಕ್ತರು ತಮ್ಮ ಪೂರ್ವಜರಿಂದ ಬಂದ ಸಂಪ್ರದಾಯದಂತೆ ಕಾಂಕ್ರೇಜ್ ತಳಿಯ ದೊಡ್ಡ ಕೊಂಬುಗಳ ಹೋರಿಗಳೊಂದಿಗೆ ಪ್ರತಿವರ್ಷ ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೆರಳುತ್ತಾರೆ. ಅದೇ ರೀತಿ ಈ ಬಾರಿ ಅವರು ತಮ್ಮ ಊರಿನಿಂದ ಧರ್ಮಸ್ಥಳ, ತಿರುಪತಿ, ಪುರಿ ಜಗನ್ನಾಥ ಕ್ಷೇತ್ರದ ದರ್ಶನಕ್ಕಾಗಿ ಹೊರಟಿದ್ದು, ಈ ವೇಳೆ ಬಿ.ಸಿ.ರೋಡಿನ ತಲಪಾಡಿಯಲ್ಲಿ ವಿಶ್ರಾಂತಿ ಪಡೆದಿದ್ದಾರೆ.

ಅವರ ಜತೆ ಮೂರು ಬೃಹತ್ ಗಾತ್ರದ ಹೋರಿಗಳಿದ್ದು, ಸುಮಾರು 13 ಮಂದಿ ಜತೆಗಿದ್ದಾರೆ. ಹೋರಿಗಳನ್ನು ಮೂರು ಗೂಡ್ಸ್ ವಾಹನಗಳಲ್ಲಿ ಸಾಗಿಸುತ್ತಿದ್ದು, ಒಂದು ವಾಹನದಲ್ಲಿ ಅವರ ತಂಡ ಸಾಗುತ್ತದೆ. ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಸಾಗುತ್ತಿದ್ದು, ಈ ಸಂದರ್ಭದಲ್ಲಿ ಹೋರಿಗಳು ಜನಾಕರ್ಷಣೆಗೆ ಕಾರಣವಾಗುತ್ತಿದೆ. ಕಳೆದೆರಡು ದಿನಗಳಿಂದ ಅವರ ತಂಡ ಬಿ.ಸಿ.ರೋಡಿನ ತಲಪಾಡಿಯಲ್ಲಿ ಬೀಡು ಬಿಟ್ಟಿದ್ದು, ಅವರ ಒಂದು ಹೋರಿಗೆ ಕೊಂಚ ಆರೋಗ್ಯ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಒಂದೆರಡು ದಿನ ಹೆಚ್ಚೇ ವಿಶ್ರಾಂತಿ ಪಡೆಯುತ್ತಿರುವುದಾಗಿ ಅವರ ತಂಡ ತಿಳಿಸಿದೆ.
ಹೀಗೆ ಸಾಗುವ ಸಂದರ್ಭದಲ್ಲಿ ಜನ ಅಪರೂಪದ ಹೋರಿಗಳನ್ನು ಕಂಡು ಆಹಾರ, ಕಾಣಿಕೆ ನೀಡುತ್ತಾರೆ. ಅದನ್ನು ಸ್ವೀಕರಿಸಿಕೊಂಡು ನಮ್ಮ ಪ್ರಯಾಣ ಬೆಳೆಸುತ್ತೇವೆ. ಪುಣ್ಯಕ್ಷೇತ್ರಗಳ ಸಂದರ್ಶನದ ಸಂದರ್ಭದಲ್ಲಿ ಮಹಾನಂದಿಗಳಿಗೆ ಅಲ್ಲಿನ ಜಲವನ್ನು ಅಭಿಷೇಕ ಮಾಡುವುದು ನಮ್ಮ ಸಂಪ್ರದಾಯವಾಗಿದೆ. ಪ್ರಸ್ತುತ ಧರ್ಮಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಹೋರಿಯನ್ನು ಧಾರ್ಮಿಕ ಹಿನ್ನೆಲೆಯಂತೆ ಸಂಪೂರ್ಣ ಅಲಂಕಾರ ಮಾಡುತ್ತೇವೆ. ಜತೆಗೆ ನಮ್ಮ ಸಂಪ್ರದಾಯಿಕ ಉಡುಗೆಗಳನ್ನು ತೊಟ್ಟು ದೇವರ ದರ್ಶನ ಪಡೆಯುತ್ತೇವೆ. ಜತೆಗೆ ಅಲಂಕೃತ ಹೋರಿಗಳು ತಮ್ಮ ಸಾಹಸ ಪ್ರದರ್ಶನಗಳನ್ನು ನೀಡುತ್ತೇವೆ. ಅದನ್ನು ಕಂಡು ಭಕ್ತರು ಒಂದಷ್ಟು ಕಾಣಿಕೆ ನೀಡುತ್ತಿದ್ದು, ಅದು ನಮ್ಮ ಪ್ರಯಾಣದ ವೆಚ್ಚದ ಜತೆಗೆ ಮಹಾನಂದಿಗಳ ಆಹಾರಕ್ಕೆ ಅನುಕೂಲವಾಗುತ್ತದೆ ಎಂದು ಅವರು ವಿವರಿಸುತ್ತಾರೆ.