ಉಡುಪಿ, ಫೆ. 05 (DaijiworldNews/TA): ಕೋಟದಿಂದ ಬೆಂಗಳೂರಿಗೆ ಪ್ರಯಾಣಿಸಲು ಮುಂಗಡ ಟಿಕೆಟ್ ಬುಕ್ ಮಾಡಿದ್ದ ಮಹಿಳೆ ಸೇರಿ ಮೂವರು ಪ್ರಯಾಣಿಕರನ್ನು ಬಿಟ್ಟು ಹೊರಟ ಖಾಸಗಿ ಬಸ್ಸಿನ ಚಾಲಕ, ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಮಂಗಳವಾರ ಸಂಜೆ ಮುರುಡೇಶ್ವರದಿಂದ ಬೆಂಗಳೂರು ತೆರಳುವ ಖಾಸಗಿ ಬಸ್ಸನ್ನು ಕೋಟ - ಮಣೂರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರನ್ನು ಬಸ್ ಚಾಲಕ ನಿಗದಿತ ಸ್ಥಳದಲ್ಲಿ ನಿಲ್ಲಿಸದೆ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದಾನೆ ಎನ್ನಲಾಗಿದೆ. ಸಾಕಷ್ಟು ಹೊತ್ತು ಕಾದು ಸುಸ್ತಾದ ಪ್ರಾಯಾಣಿಕರು ನಂತರ ಬಸ್ಸಿನ ಬಳಿ ತೆರಳಿ, ಚಾಲಕನನ್ನು ಪ್ರಶ್ನಿಸಿದಾಗ, ಬಸ್ ನಿರ್ವಾಹಕ ಮಧ್ಯ ಪ್ರವೇಶಿಸಿ ಮಹಿಳೆ ಹಾಗೂ ಯುವಕರೊಂದಿಗೆ ಅವಾಚ್ಯ ಶಬ್ದ ಬಳಸಿ ಬೈದಿದ್ದಾನೆ ಎನ್ನಲಾಗಿದ್ದು, ನಿರ್ವಾಹಕನ ವರ್ತನೆಗೆ ಕೋಪಗೊಂಡ ಪ್ರಯಾಣಿಕರು ತಮ್ಮ ಮನೆಯವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬಸ್ಸನ್ನು ಕೋಟ ಪೆಟ್ರೋಲ್ ಬಂಕ್ ಸಮೀಪ ತಡೆದು ನಿಲ್ಲಿಸಿದರು.
ಈ ವೇಳೆ ನಿರ್ವಾಹಕ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು. ಅನಂತರ ಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ ಪ್ರಯಾಣಿಕರು ಪಾವತಿಸಿದ್ದ ಮುಂಗಡ ಟಿಕೆಟ್ ಹಣವನ್ನು ವಾಪಸು ಕೊಡಿಸಿದರು. ಆ ಬಳಿಕ ಮೂವರು ಪ್ರಯಾಣಿಕರು ಬೇರೆ ಬಸ್ಸಿನಲ್ಲಿ ಬೆಂಗಳೂರು ಕಡೆ ಪ್ರಯಾಣ ಮುಂದುವರಿಸಿದರು.