ಬಂಟ್ವಾಳ, ಫೆ. 05 (DaijiworldNews/TA): ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಹಂತ ಹಂತವಾಗಿ ಮುಗಿಸಿಕೊಂಡು ಬರಲಾಗುತ್ತಿದ್ದು, ಇದೀಗ ಹೆದ್ದಾರಿ ಪ್ರಯಾಣಿಕರು ಸೂಕ್ತ ಮಾಹಿತಿ ನೀಡುವ ಕಮಾನು ಮಾದರಿಯಲ್ಲಿ ದಾರಿ ಸೂಚಕ ಫಲಕ ಅಳವಡಿಕೆಯ ಕಾರ್ಯ ಆರಂಭಗೊಂಡಿದೆ.


ರಸ್ತೆ ನಿರ್ಮಾಣದ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡ ಭಾಗದಲ್ಲಿ ಮುಂದಿನ ಹಂತದ ಕಾರ್ಯವನ್ನು ಗುತ್ತಿಗೆ ಸಂಸ್ಥೆ ಕೈಗೆತ್ತಿಕೊಂಡಿದ್ದು, ಬೀದಿದೀಪ ಅಳವಡಿಕೆ ಸೇರಿದಂತೆ ಇತರ ಕಾರ್ಯಗಳನ್ನು ಮುಗಿಸಿ ಫಲಕಗಳನ್ನು ಅಳವಡಿಸಲಾಗುತ್ತಿದೆ.
ನೂತನ ಹೆದ್ದಾರಿ ನಿರ್ಮಾಣಗೊಂಡ ಬಳಿಕ ಫ್ಲೈಓವರ್, ಎಲಿವೇಟೆಡ್ ರಸ್ತೆಯ ಪರಿಣಾಮ ಮುಖ್ಯಹೆದ್ದಾರಿ ಜಂಕ್ಷನ್ ಗಳನ್ನು ಬಿಟ್ಟು ಮೇಲಿಂದಲೇ ಹೋಗುತ್ತಿದೆ. ಹೀಗಾಗಿ ಹೊಸದಾಗಿ ಬರುವ ಪ್ರಯಾಣಿಕರಿಗೆ ನಾವು ಯಾವ ಊರಿಗೆ ಬಂದಿದ್ದೇವೆ, ನಾವು ಹೋಗಬೇಕಾದ ಊರಿಗೆ ಎಲ್ಲಿ ತಿರುಗಬೇಕು ಹೀಗೆ ಸಂಪೂರ್ಣವಾಗಿ ಗೊಂದಲಗೊಳ್ಳುವುದರಿಂದ ಈ ಮಾಹಿತಿ ಫಲಕಗಳು ಅಗತ್ಯವಾಗಿದೆ.