ಕಾಸರಗೋಡು, ಫೆ. 04 (DaijiworldNews/AA): ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಟೋಲ್ ಶುಲ್ಕ ವಸೂಲಿಗೆ ಕೇಂದ್ರ ಸಾರಿಗೆ ಸಚಿವಾಲಯ ತಡೆ ನೀಡಿದೆ. ಮುಂದಿನ 24 ಗಂಟೆ ಯೊಳಗೆ ಟೋಲ್ ಗೇಟ್ ಮುಚ್ಚಲಾಗುವುದು ಎಂದು ಭರವಸೆ ನೀಡಿದ್ದಾರೆ.




ಟೋಲ್ ಶುಲ್ಕ ವಸೂಲು ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಹೋರಾಟ ನಡೆದಿತ್ತು. ಹೋರಾಟ ಸಮಿತಿ ರಚಿಸಿ ಪ್ರತಿಭಟನೆ ಜೊತೆಗೆ ಕಾನೂನು ಹೋರಾಟ ವೂ ನಡೆದಿತ್ತು. ಶುಲ್ಕ ವಸೂಲು ಸ್ಥಗಿತಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಒಂದು ಟೋಲ್ ಗೇಟ್ ನಿಂದ 60 ಕಿ. ಮೀ ಅಂತರ ಇರಬೇಕೆಂಬ ಕೇಂದ್ರ ಸಾರಿಗೆ ಸಚಿವಾಲಯದ ನಿರ್ದೇಶನ ಉಲ್ಲಂಘಿಸಿ ಕೇವಲ 23 ಕಿ. ಮೀ ದೂರದ ಕುಂಬಳೆ ಆರಿಕ್ಕಾಡಿ ಯಲ್ಲಿ ಟೋಲ್ ಶುಲ್ಕ ವಸೂಲು ಆರಂಭಿಸಿತ್ತು. ಇದರಿಂದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ನೇತೃತ್ವದಲ್ಲಿ ಹೋರಾಟ ನಡೆದಿತ್ತು.
ಬಿಜೆಪಿ ಹೊರತು ಉಳಿದ ಪಕ್ಷಗಳು, ಸಂಘಟನೆಗಳ ನೇತೃತ್ವದಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿ ರಚಿಸಿ ಹೋರಾಟ ನಡೆಸುತ್ತಾ ಬಂದಿತ್ತು. ಹೋರಾಟವು ಹಿಂಸಾತ್ಮಕ ರೂಪು ಪಡೆದಿತ್ತು. ಟೋಲ್ ಗೇಟ್ ಮೇಲೆ ದಾಳಿ ನಡೆದು, ಕ್ಯಾಮರಾ, ಬ್ಯಾರಿಕೇಡ್, ಗಾಜುಗಳನ್ನು ಸೇರಿದಂತೆ ಹಲವು ರೀತಿಯ ನಷ್ಟಕ್ಕೂ ಕಾರಣವಾಗಿತ್ತು. ಶಾಸಕರು ಅಹೋ ರಾತ್ರಿ ಧರಣಿ ನಡೆಸಿದ್ದರು. ಪರಿಸ್ಥಿತಿ ದಿನಕಳೆದಂತೆ ವಿಕೋಪಕ್ಕೆ ತೆರಳುತ್ತಿತ್ತು.
ನಂತರ ಪೊಲೀಸರು ಧರಣಿ ನಡೆಸುತ್ತಿದ್ದ ಶೆಡ್ ತೆರವುಗೊಳಿಸಿ ಶಾಸಕ ಎ.ಕೆ.ಎಂ ಅಶ್ರಫ್ ಸೇರಿದಂತೆ ಹೋರಾಟ ಸಮಿತಿ ಮುಖಂಡರನ್ನು ಬಂಧಿಸಿದರು. ಸಿಪಿಎಂ ಮುಖಂಡ ಸಿ. ಎ ಜುಬೈರ್, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಪ್ರಭು, ಅಶ್ರಫ್ ಕಾರ್ಲೆ ಮೊದಲಾದವರು ಹೋರಾಟದ ಮುಂಚೂಣಿಯಲ್ಲಿದ್ದರು.
ಟೋಲ್ ಶುಲ್ಕ ವಸೂಲು ರದ್ದು ಪಡಿಸುವ ಕೇಂದ್ರ ಸಾರಿಗೆ ಸಚಿವಾಲಯದ ತೀರ್ಮಾನದ ವಿರುದ್ಧ ಹೋರಾಟ ಸಮಿತಿ ಕುಂಬಳೆ ಯಲ್ಲಿ ವಿಜಯೋತ್ಸವ ನಡೆಸಿತು. ಹೋರಾಟ ಸಮಿತಿ ಕಳೆದ ಎರಡು ತಿಂಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಸಂದ ಜಯ ಎಂದು ಶಾಸಕ ಎ.ಕೆ.ಎಂ ಅಶ್ರಫ್ ಹಾಗೂ ಸಿ. ಎ ಜುಬೈರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದು, ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಕೇಂದ್ರ ಸಚಿವ ನಿತಿನ್ ಗಡ್ಕರಿರವರನ್ನು ಅಭಿನಂದಿಸಿದ್ದಾರೆ. ಬಿಜೆಪಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು.