ಮಂಗಳೂರು, ಜ. 28(DaijiworldNews/TA): ಬಸ್ನಲ್ಲಿ ಪ್ರಯಾಣಿಸುವಾಗ ಹಠಾತ್ ಕುಸಿದು ಬಿದ್ದ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡಲು ಬಸ್ ಅನ್ನೇ ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕೈಕಂಬದಿಂದ ಸ್ಟೇಟ್ ಬ್ಯಾಂಕ್ ನಡುವಣ ಸಂಚರಿಸುತ್ತಿದ್ದ ಬಸ್ಗೆ ಬೆಳಗ್ಗೆ ಸುಮಾರು 9.40ರ ವೇಳೆಗೆ ಉರ್ವ ಸ್ಟೋರ್ನಿಂದ ಮಹಿಳೆಯರೊಬ್ಬರು ಹತ್ತಿದ್ದರು. ಚಿಲಿಂಬಿ ಬಳಿ ಅವರಿಗೆ ಹಠಾತ್ ಆರೋಗ್ಯ ಸಮಸ್ಯೆ ಉಂಟಾಗಿ ಕುಳಿತಿದ್ದ ಸೀಟಿನಲ್ಲೇ ಕುಸಿದು ಬಿದ್ದರು. ಏನು ಮಾಡಲೆಂದು ತೋಚಲಿಲ್ಲ. ಆಗ ಕೂಡಲೇ ಬಸ್ ಚಾಲಕ ತೌಸೀಫ್ ಹಾಗೂ ನಿರ್ವಾಹಕ ತೌಸೀಫ್ ನೇರವಾಗಿ ಬಸ್ ಅನ್ನು ಆಸ್ಪತ್ರೆಯತ್ತ ಚಲಾಯಿಸಿದರು.
ಆಸ್ಪತ್ರೆಗೆ ತಲುಪಿದ ಬಳಿಕ ಕೆಲ ಕಾಲ ನಿರ್ವಾಹಕ ಅಲ್ಲೇ ಇದ್ದು, ಬಸ್ ಅನ್ನು ಕಳುಹಿಸಲಾಯಿತು. ಮಹಿಳೆಯ ಕುಟುಂಬದವರ ಬಂದ ಬಳಿಕ ನಿರ್ವಾಹಕ ತೌಸೀಫ್ ಮತ್ತೆ ಕೆಲಸಕ್ಕೆ ತೆರಳಿದರು. ಮಹಿಳೆ ಚೇತರಿಸಿಕೊಂಡಿದ್ದು, ಬಸ್ ಸಿಬಂದಿಯ ಸಮಯ ಪ್ರಜ್ಞೆ ಹಾಗೂ ಮಾನವೀಯ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.