ಮಂಗಳೂರು, ಜ. 28(DaijiworldNews/TA): ದಕ್ಷಿಣ ಕನ್ನಡ ಜಿಲ್ಲೆಯ ಕೊನೇಯ ಗ್ರಾಮ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದಲ್ಲಿ 2025ರ , ಸೆ.25 ರಂದು ಗ್ರಾಮ ಪಂಚಾಯತ್ ಎದುರುಗಡೆ ನಡೆದಿದ್ದ ಪ್ರತಿಭಟನೆ ನಂತರ ಪಂಚಾಯತ್ ಅಧ್ಯಕ್ಷರು ಹಾಗೂ ಆರೋಪಿತ ಸಿಬ್ಬಂದಿ ಮೊಬೈಲ್ ಸಂಭಾಷಣೆ ಇದೀಗ ವೈರಲ್ ಆಗಿದ್ದು, ಗ್ರಾಮಸ್ಥರು ಆಡಿಯೋ ವಿಚಾರವಾಗಿ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಪಂಚಾಯಿತಿ ಕಚೇರಿಯ ಉಪಕರಣಗಳನ್ನು ಕಳವು ಮಾಡಿರುವ ಪಂಚಾಯತ್ ಸಿಬ್ಬಂದಿ ಕುರಿತು ಸ್ಪಷ್ಟ ಸಾಕ್ಷ್ಯಗಳಿದ್ದರೂ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲಾಗಿಲ್ಲ . ಜೊತೆಗೆ ಪಂಚಾಯಿತಿಗೆ ಸೇರಿದ ಸಿಸಿಟಿವಿ ಕ್ಯಾಮರಾಗಳನ್ನು ದುರುಪಯೋಗಪಡಿಸಿಕೊಂಡು ಖಾಸಗಿ ವ್ಯಕ್ತಿಗಳ ವಿಡಿಯೋಗಳನ್ನು ಗುಪ್ತವಾಗಿ ದಾಖಲಿಸಿ, ಅವುಗಳನ್ನು ವಾಟ್ಸಪ್ ಮೂಲಕ ಹರಡಲಾಗುತ್ತಿದೆ ಇದರಿಂದ ಸಾರ್ವಜನಿಕರ ಗೌಪ್ಯತೆಗೆ ಧಕ್ಕೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಅಂಗಡಿ ಮುಗ್ಗಟ್ಟುಗಳನ್ನು ಮಧ್ಯಾಹ್ನದವರೆಗೆ ಬಂದ್ ನಡೆಸಿ ಪಂಚಾಯತ್ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಂತರ ಅದೇ ದಿನ ಸಂಜೆ ಪಂಚಾಯತ್ ಅಧ್ಯಕ್ಷೆ ಮೋಹಿನಿ ಕಟ್ಟಾ ಎಂಬವರು, ತಪ್ಪಿತಸ್ಥ ಸಿಬ್ಬಂದಿ ಸಂತೋಷ್ ಜೊತೆಗೆ ನಡೆಸಿರುವ ಮೊಬೈಲ್ ಸಂಭಾಷಣೆ ಇದೀಗ ವೈರಲ್ ಆಗಿದೆ.
ಸಮಸ್ಯೆ ಏನೂ ಆಗುವುದಿಲ್ಲ, ಸೈನ್ ಥಂಬ್ ಕೊಡದೇ ಇದ್ದರೂ ಯಾವುದೇ ಸಮಸ್ಯೆಗಳಾಗುವುದಿಲ್ಲ. ಅವರನ್ನು ಆಟವಾಡಿಸುವ. ಅವರ ಯಾವುದೇ ಕೆಲಸಗಳಿಗೆ ಸೈನ್ ಥಂಬ್ ಹಾಕದೇ ಕುಣಿಸುವ, ಯಾವುದೇ ವಿಚಾರವನ್ನು ಬಾಯಿ ಬಿಡುವುದು ಬೇಡ. ನಿಮ್ಮನ್ನು ಸೀಟಿನಿಂದ ಯಾರೂ ತೆಗೆಯಲು ಸಾಧ್ಯವಿಲ್ಲ. ಸಿಬ್ಬಂದಿ ಮತ್ತು ಪಿಡಿಓ ಅವರ ತಪ್ಪು, ಸದಸ್ಯರು, ಅಧ್ಯಕ್ಷರ ಗಮನಕ್ಕೆ ತರಲಿಲ್ಲ. ಉಳಿದ ಸಿಬ್ಬಂದಿ ಜೊತೆಗೆ ಯಾವುದೇ ಮಾಹಿತಿಯನ್ನು ಹಂಚದಿರಿ, ಯಾರು ಜೊತೆಗಿರುವ ಸಂದರ್ಭ ಫೋನ್ ಕಾಲ್ ಮಾಡಲು ಹೋಗದಿರಿʼ ಅನ್ನುವ ಆಡಿಯೋ ಇದೀಗ ವೈರಲ್ ಆಗಿದೆ. ಅಂದು ಪ್ರತಿಭಟನೆಯಲ್ಲಿ ಪಂಚಾಯತ್ ಉಪಾಧ್ಯಕ್ಷರ ವಿರುದ್ಧ ಆರೋಪವನ್ನು ಪ್ರತಿಭಟನಾಕಾರರು ಮಾಡಿದ್ದರು. ಇದೀಗ ಅಧ್ಯಕ್ಷರೇ ಸಿಬ್ಬಂದಿ ಜೊತೆಗೆ ಮಾತನಾಡಿರುವ ಆಡಿಯೋ ಹೊರಬಿದ್ದಿದ್ದು, ಪ್ರಕರಣದ ಸಮಗ್ರ ತನಿಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.