ಮಂಗಳೂರು, ಜ. 26 (DaijiworldNews/TA): ಹವಾಮಾನದಲ್ಲಿ ದಿಢೀರ್ ಬದಲಾವಣೆಯಿಂದ ಜನರ ಆರೋಗ್ಯದಲ್ಲಿ ಏರುಪೇರುಗಳು ಕಾಣಿಸಿಕೊಂಡಿದೆ. ನಗರ ಭಾಗದಲ್ಲಿ ಜ್ವರದ ಕಾವು ಜಾಸ್ತಿಯಾದರೆ ಗ್ರಾಮಾಂತರ ಭಾಗದಲ್ಲಿ ಕಾಮಾಲೆ ರೋಗದ ಪ್ರಮಾಣ ಹೆಚ್ಚುತ್ತಿದೆ. ಮತ್ತೊಂದೆಡೆ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಆರೋಗ್ಯದಲ್ಲೂ ವ್ಯತ್ಯಾಸ ಕಾಣಿಸಿಕೊಳ್ಳುತ್ತಿದೆ.

ಜನವರಿ ತಿಂಗಳಲ್ಲಿ ಜಿಲ್ಲೆಯ ಕೆಲವು ಭಾಗದಲ್ಲಿ ದಿಢೀರ್ ಮಳೆ ಕಾಣಿಸಿಕೊಂಡಿತ್ತು. ಈ ಬಳಿಕ ಚಳಿ, ಬಿಸಿಲಿನ ವಾತಾವರಣದಿಂದ ಹವಾಮಾನದಲ್ಲಿ ಏರುಪೇರು ಕಾಣಿಸಿದ್ದು, ಇದಕ್ಕೆ ಪೂರಕವಾಗಿ ಆರೋಗ್ಯ ವಲಯದಲ್ಲೂ ತಲ್ಲಣಗಳು ನಡೆಯುತ್ತಿದೆ. ಮಳೆಗಾಲದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಮಾಲೆ ರೋಗ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಈ ಬಾರಿ ಜನವರಿ ತಿಂಗಳಲ್ಲಿಯೇ ಕಾಣಿಸಿಕೊಂಡಿದೆ. ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಕಾಮಾಲೆ ರೋಗ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿರುವುದು ಕಳವಳಕಾರಿಯಾಗಿದೆ.
ಈ ಬಾರಿ ನೀರು ಕಲುಷಿತದ ಪರಿಣಾಮ ಕಾಮಾಲೆ ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಮುಖ್ಯವಾಗಿ ಬೇಸಿಗೆ ಪೂರ್ಣವಾಗಿ ಇನ್ನೂ ಆರಂಭವಾಗಿಲ್ಲ ಆದರೆ ಶುದ್ದ ಕುಡಿಯುವ ನೀರಿನ ಬಳಕೆ ಕಡಿಮೆಯಾಗಿರುವ ಪರಿಣಾಮ ಕಾಮಾಲೆ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನುವುದು ವೈದ್ಯರ ಮಾತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಕಲುಷಿತ ನೀರಿನ ಪೂರೈಕೆಯಿಂದ ಕಾಲೇಜು ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಫುಡ್ ಪಾಯಿಸನ್ ಕೂಡ ಕಾಣಿಸಿಕೊಂಡಿತ್ತು. ಈ ಬಾರಿ ಬಿಸಿಲು ಶುರುವಾಗಿದ್ದಂತೆ ನಗರ ಭಾಗದಲ್ಲಿ ನೀರಿನ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗಿದೆ.
ಕೊಳವೆ ಬಾವಿಗಳಿಂದ ನೀರನ್ನು ಎತ್ತುವ ಕಾಯ ಬಹಳಷ್ಟು ಕಡೆಯಲ್ಲಿ ನಡೆಯುತ್ತದೆ. ಆದರೆ ಕೊಳವೆ ಬಾವಿಯ ನೀರಿನ ಪರಿಶುದ್ಧತೆಯ ಗುಣಮಟ್ಟವನ್ನು ಪರೀಕ್ಷೆ ಮಾಡುವ ಕಾರ್ಯವನ್ನು ಮಾಡಬೇಕು. ಮನಪಾದ ಟ್ಯಾಂಕರ್ಗಳು ನೀರನ್ನು ಎಲ್ಲಿಂದ ತರಲಾಗುತ್ತಿದೆ ಹಾಗೂ ಅದರ ಗುಣಮಟ್ಟ, ಟ್ಯಾಂಕರ್ ಶುದ್ಧವಾಗಿದೆಯಾ ಎನ್ನುವ ಪರೀಕ್ಷೆ ಮಾಡುವ ಕಾರ್ಯಗಳು ನಡೆಯಬೇಕು ಎನ್ನುತ್ತಾರೆ ಸಾಮಾಜಿಕ ಕಾರಕರ್ತ ಅಶ್ವಿನ್ ಮಂಗಳೂರು.