ಮಂಗಳೂರು, ಜ. 25 (DaijiworldNews/TA): ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಆರೋಪಿಗಳಿಗೆ ಜಾಮೀನು ಸಂದರ್ಭ ಶ್ಯೂರಿಟಿ ಒದಗಿಸುವವರು ಎಚ್ಚರಿಕೆ ವಹಿಸದಿದ್ದರೆ ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡುವ ವೇಳೆ, ಆರೋಪಿಗಳನ್ನು ಬಂಧಿಸುವುದು ಒಂದು ಕಡೆಯಾದರೆ, ಆರೋಪಿಗಳು ಸಿಗದಿದ್ದಾಗ ಅವರಿಗೆ ಜಾಮೀನು ನೀಡಿದ ವರ ಮೇಲೆ ಕ್ರಮ ವಹಿಸುವಂತೆ ಪ್ರತಿ ಠಾಣೆಗಳಿಗೂ ಸೂಚನೆ ನೀಡಲಾಗಿತ್ತು. ಅದರಂತೆ 15 ಮಂದಿ ರೌಡಿಗಳನ್ನು ಬಂಧಿಸಿ ಪ್ರಕರಣಗಳ ವಿಚಾರಣೆ ಆರಂಭಿಸಲಾಗಿದೆ. ಅದಲ್ಲದೆ, ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಕಾರ್ಯಾಚರಣೆ ಆರಂಭಿಸಲಾಗಿದೆ.
ನಗರದಲ್ಲಿ ಕಳೆದ 6 ತಿಂಗಳಿನಿಂದ ದೀರ್ಘಾವಧಿಯ ಗಂಭೀರ ಪ್ರಕರಣಗಳಾದ ಕೊಲೆ, ಮತೀಯ ಗಲಭೆ ವೇಳೆ ಕಲ್ಲು ತೂರಾಟ, ಮತೀಯ ಕೊಲೆ ಯತ್ನ, ಅತ್ಯಾಚಾರ, ಗುಂಪು ಅತ್ಯಾಚಾರ ಮೊದಲಾದ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿ ಕೊಂಡಿರುವ ರೌಡಿ ಶೀಟರ್ಗಳನ್ನು ಹಿಡಿಯುವ ಉದ್ದೇಶದಿಂದ ಪೊಲೀಸರಿಂದ ಪ್ರತ್ಯೇಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.