ಕಡಬ, ಜ. 24 (DaijiworldNews/AA): ರಾಮಕುಂಜದಲ್ಲಿ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ತಂದೆಯೇ ಮಗನಿಗೆ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ.

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಕುಂಜದ ಪಾದೆ ಎಂಬಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿತ್ತು.
ಮೋಕ್ಷ (17) ಗುಂಡೇಟು ತಗುಲಿ ಸಾವನ್ನಪ್ಪಿದ ಬಾಲಕ. ರಾಮಕುಂಜ ಗ್ರಾಮದ ಪಾದೆ ನಿವಾಸಿ ತಂದೆ ವಸಂತ ಪೂಜಾರಿ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವಸಂತ ಪೂಜಾರಿ ವಿರುದ್ಧ ಆತನ ಪತ್ನಿ ಜಯಶ್ರೀ ದೂರು ದಾಖಲಿಸಿದ್ದಾರೆ. ಮಗನಿಗೆ ಶೂಟ್ ಮಾಡಿ ಆರೋಪಿ ವಸಂತ ಪೂಜಾರಿ ಚಾಕುವಿನಿಂದ ತನ್ನನ್ನು ಇರಿದುಕೊಂಡಿದ್ದಾನೆ. ಗಾಯಗೊಂಡ ಆರೋಪಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಕಳೆದ ಒಂದು ವರ್ಷದಿಂದ ಮನೆಯಲ್ಲಿ ತಂದೆ ಮತ್ತು ಮಗ ಮಾತ್ರ ವಾಸಿಸುತ್ತಿದ್ದರು. ಪತ್ನಿ ಜಯಶ್ರೀ ಪತಿಯೊಂದಿಗೆ ಮನಸ್ತಾಪಗೊಂಡು ಮಂಗಳೂರಿನ ತನ್ನ ತಾಯಿ ಮನೆಯಲ್ಲಿದ್ದರು.
ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.