ಉಡುಪಿ, ಜ. 24 (DaijiworldNews/AA): ಕರ್ನಾಟಕದ ವಿಶೇಷ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ತುರ್ತು ಪರಿಹಾರವನ್ನು ಒತ್ತಾಯಿಸಿ, ಉಡುಪಿ ಜಿಲ್ಲಾ ವಿಶೇಷ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಸಂಘ ಹಾಗೂ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಸಂಘದ ವತಿಯಿಂದ ಜನವರಿ 28 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.

ಶನಿವಾರ ಉಡುಪಿ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಅಧ್ಯಕ್ಷೆ ಡಾ. ಕಾಂತಿ ಹರೀಶ್, "ಶಿಶು ಕೇಂದ್ರಿತ ಯೋಜನೆಯಡಿ ಅನುದಾನ ಪಡೆಯುತ್ತಿರುವ ವಿಶೇಷ ಶಾಲೆಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದೀರ್ಘಕಾಲದ ಬೇಡಿಕೆಗಯಳು ಮತ್ತು ನೀತಿ ಸುಧಾರಣೆಗಳ ಜಾರಿಗೆ ಈ ಮೂಲಕ ಒತ್ತಾಯಿಸಲಾಗುವುದು" ಎಂದರು.
1982ರ ಅನುದಾನಿತ ಯೋಜನೆಯಡಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಶಿಶು ಕೇಂದ್ರಿತ ಯೋಜನೆಯಡಿ ಕೆಲಸ ಮಾಡುವ ಸಿಬ್ಬಂದಿಗೂ ವಿಸ್ತರಿಸಬೇಕು. ವಿಧಾನಸಭಾಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯ ಶಿಫಾರಸಿನಂತೆ, ವಿಶೇಷ ಶಾಲೆಗಳ ಅನುದಾನವನ್ನು ಶೇ. 40 ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಸರ್ಕಾರ ತಕ್ಷಣ ಅನುಮೋದನೆ ನೀಡಬೇಕು. ವಿಶೇಷ ಶಿಕ್ಷಕರಿಗೆ ಪೂರ್ಣ ಆರ್ಥಿಕ ಸೌಲಭ್ಯಗಳನ್ನು ಖಚಿತಪಡಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರಬೇಕು. ಶಿಶು ಕೇಂದ್ರಿತ ನೆರವು ಯೋಜನೆಯ ಮಾರ್ಗಸೂಚಿಗಳನ್ನು ಪ್ರತಿ ಐದು ವರ್ಷಕ್ಕೊಮ್ಮೆ ತಜ್ಞರನ್ನೊಳಗೊಂಡ ಸಮಿತಿಯ ಮೂಲಕ ಪರಿಷ್ಕರಿಸಬೇಕು. ಶಾಲೆಗಳ ಸುಗಮ ನಿರ್ವಹಣೆಗಾಗಿ ಸರ್ಕಾರದ ಅನುದಾನವನ್ನು ವರ್ಷಕ್ಕೆ ಎರಡು ಕಂತುಗಳಲ್ಲಿ (ಜೂನ್ ಮತ್ತು ಅಕ್ಟೋಬರ್) ಬಿಡುಗಡೆ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಸಂಘದ ಗೌರವಾಧ್ಯಕ್ಷ ಅಗ್ನಿಸ್ ಕುಂದರ್, ಜಿಲ್ಲಾ ಅಧ್ಯಕ್ಷ ಹೆಚ್. ರವೀಂದ್ರ ಮತ್ತು ಇತರರು ಉಪಸ್ಥಿತರಿದ್ದರು.