ಮಂಗಳೂರು, ಜ. 23 (DaijiworldNews/AA): ಮಂಗಳೂರು ನಗರದ ಪ್ರಮುಖ ಹೆಗ್ಗುರುತಾಗಿದ್ದ ಪಂಪ್ವೆಲ್ನ ಮಹಾವೀರ ವೃತ್ತದ ಬಳಿ ಮರುಸ್ಥಾಪಿಸಲಾದ 'ಕಲಶ'ವನ್ನು ಶನಿವಾರ ಸಂಜೆ ಅದ್ಧೂರಿಯಾಗಿ ಲೋಕಾರ್ಪಣೆಗೊಳಿಸಲಾಯಿತು.





ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಕಲಶವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್, ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
2016ರಲ್ಲಿ ಪಂಪ್ವೆಲ್ ಫ್ಲೈಓವರ್ ನಿರ್ಮಾಣದ ಸಂದರ್ಭದಲ್ಲಿ ಈ ಐತಿಹಾಸಿಕ ಕಲಶವನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ನಗರದ ಸಾಂಸ್ಕೃತಿಕ ಗುರುತಾಗಿದ್ದ ಈ ಕಲಶವನ್ನು ಮರುಸ್ಥಾಪಿಸಬೇಕೆಂಬ ನಿರಂತರ ಒತ್ತಾಯ ಕೇಳಿಬಂದಿತ್ತು. ಕಳೆದ ಕೆಲವು ತಿಂಗಳುಗಳಿಂದ ಇದರ ಮರುಸ್ಥಾಪನಾ ಕಾರ್ಯವು ವೇಗವಾಗಿ ನಡೆದಿತ್ತು. ಕಳೆದ ವರ್ಷ ಅಕ್ಟೋಬರ್ನಲ್ಲಿ ಕಾಮಗಾರಿ ಆರಂಭವಾಗಿದ್ದು, ಜೈನ ಸೊಸೈಟಿಯ ಮುಂದಾಳತ್ವದಲ್ಲಿ ಈ ಮರುನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಮಂಗಳೂರಿನ ಪ್ರವೇಶ ದ್ವಾರದಂತಿರುವ ಪಂಪ್ವೆಲ್ನಲ್ಲಿ ಈ ಕಲಶವು ಮತ್ತೆ ರಾರಾಜಿಸುತ್ತಿರುವುದು ನಗರದ ಸೌಂದರ್ಯವನ್ನು ಹೆಚ್ಚಿಸಲಿದೆ. ಇಂದು ನಗರದ ಜನರ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಪ್ರತೀಕವಾಗಿದೆ.