ಬೆಳ್ತಂಗಡಿ, ಜ. 24 (DaijiworldNews/TA): ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಡಂತ್ಯಾರು ಎಂಬಲ್ಲಿ ನಡೆದಿದೆ. ಕಾವಳಮೂಡೂರು ಕಾರಿಂಜ ಪಡಿ ನಿವಾಸಿ ಪದ್ಮನಾಭ ದೇವಾಡಿಗ(45) ಮೃತಪಟ್ಟ ವ್ಯಕ್ತಿ.

ಇವರು ಉಪ್ಪಿನಂಗಡಿ ಹೋಟೆಲ್ ಒಂದರಲ್ಲಿ ಸಪ್ಲಾಯರ್ ಕೆಲಸ ಮಾಡುತ್ತಿದ್ದು, ಮೂರು ದಿನಕ್ಕೊಮ್ಮೆ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಜ.23 ರಂದು ರಾತ್ರಿ ಹೋಟೆಲ್ ನಲ್ಲಿ ಕೆಲಸ ಮುಗಿಸಿ ಸುಮಾರು 11.30 ರ ವೇಳೆ ಬರುತ್ತಿದ್ದಾಗ ಪುಂಜಾಲಕಟ್ಟೆ ಹಾಗೂ ಮಡಂತ್ಯಾರು ಮಧ್ಯ ಭಾಗದಲ್ಲಿ ಮಂಗಳೂರು ಏರ್ ಪೋರ್ಟ್ ನಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಮೃತರು ಪತ್ನಿ ಹಾಗೂ ಒಂದು ಗಂಡು ಮತ್ತು ಹೆಣ್ಣು ಮಗಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.