ಸುಳ್ಯ, ಜ. 24 (DaijiworldNews/TA): ನಗರದ ಕಸ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ, ಸುಳ್ಯನಗರ ಕಾಂಗ್ರೆಸ್ ವತಿಯಿಂದ ನಗರ ಪಂಚಾಯತ್ ಎದುರು ಪ್ರತಿಭಟನಾ ಸಭೆ ನಡೆಯಿತು.

ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿ ಆಡಳಿತ ನಡೆಸಿದವರ ಹಾಗೂ ಪಂಚಾಯತ್ ವಿರುದ್ಧ ಘೋಷಣೆ ಕೂಗಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು ಮಾತನಾಡಿ, ನಗರ ಪಂಚಾಯತ್ ಆಡಳಿತ ಹಿಡಿದವರು ನಗರದ ವ್ಯವಸ್ಥೆಯನ್ನು ಸಮಸ್ಥಿತಿಗೆ ತರಬೇಕು. ಆದರೆ ಇಲ್ಲಿ ದೊಡ್ಡದಾಗಿ ಕಸದ ಸಮಸ್ಯೆ ಎದ್ದು ಕಾಣುತ್ತಿದೆ. ಅದನ್ನು ಸರಿಪಡಿಸಲು ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ. ಇದು ಇಲ್ಲಿ ಆಡಳಿತ ನಡೆಸಿದ ಬಿಜೆಪಿಯ ವೈಫಲ್ಯ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು ಮಾತನಾಡಿ, ಘನತ್ಯಾಜ್ಯ ನಿರ್ವಹಣೆ ನಗರದ ದೊಡ್ಡ ಸಮಸ್ಯೆ. ಅದನ್ನು ಸರಿಪಡಿಸಲು ಬಿಜೆಪಿ ಆಡಳಿತ ವಿಫಲವಾಗಿ ಹೊರ ನಡೆದಿದೆ. ಘನತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗಬೇಕು. ಇಂದು ನಾವು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಸಮಸ್ಯೆ ಸರಿಪಡಿಸದೇ ಇದ್ದರೆ ಬೃಹತ್ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.