ಮಂಗಳೂರು, ಜ. 21 (DaijiworldNews/ TA): ಸುರತ್ಕಲ್ ಹೋಬಳಿ ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು 3ನೆ ವಾರ್ಡ್ನ ಮೂಡುಬಾಳಿಕೆ ಎಂಬಲ್ಲಿ ಕೋಸ್ಟ್ ಗಾರ್ಡ್ನಿಂದ ಕಂಪೌಂಡ್ ನಿರ್ಮಾಣ ಕಾಮಗಾರಿಗೆ ಮುಂದಾಗಿದ್ದು, ಇದರಿಂದ ಅಲ್ಲಿನ ಪರಿಶಿಷ್ಟ ಜಾತಿಯ 10 ಕುಟುಂಬಗಳು ರಸ್ತೆ ಇಲ್ಲದೆ ದಿಗ್ಬಂಧನಕ್ಕೊಳಗಾಗುವ ಭೀತಿಯನ್ನು ಎದುರಿಸುತ್ತಿವೆ.

ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ಮಾತನಾಡಿ, ಕುಟುಂಬಗಳಿಗೆ ಆಸರೆಯಾಗಿದ್ದ ಏಕ ಮಾತ್ರ ರಸ್ತೆಯನ್ನು ಭಾರತೀಯ ಕೋಸ್ಟ್ಗಾರ್ಡ್ನವರು ಕಂಪೌಂಡ್ ನಿರ್ಮಾಣಕ್ಕೆ ಮುಂದಾಗಿರುವುದರಿಂದ ದಿನನಿತ್ಯ ಸಂಚಾರಕ್ಕೆ ಈ ಕುಟುಂಬಗಳು ಪರದಾಡುವಂತಾಗಿದೆ. ಈ ಬಗ್ಗೆ ಸಂಘಟನೆಯ ನೇತೃತ್ವದಲ್ಲಿ ಈಗಗಾಲೇ ಸಂಸದರು, ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ನ್ಯಾಯ ದೊರಕದಿದ್ದರೆ ಪ್ರತಿಭಟನೆ ಅನಿವಾರ್ಯವಾಗಲಿ ಎಂದರು. ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ವಿವರ ನೀಡಿದರು, ರಘು ಎಕ್ಕಾರು ಅಧಿಕಾರಿಗಳನ್ನು ಎಚ್ಚರಿಸಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ತಾಲೂಕು ಸಂಘಟನಾ ಸಂಚಾಲಕ ರುಕ್ಕಯ್ಯ ಅಮೀನ್ ಕರಂಬಾರು, ಕೆಂಜಾರು ಗ್ರಾಮ ಸಂಚಾಲಕ ಲಿಂಗಪ್ಪ ಕುಂದರ್, ಸ್ಥಳೀಯ ನಿವಾಸಿ ಯಮುನಾ ಉಪಸ್ಥಿತರಿದ್ದರು.