ಸುಳ್ಯ, , ಜ. 16 (DaijiworldNews/AK):ಮಡಿಕೇರಿ ಕಡೆಯಿಂದ ಆಗಮಿಸುತ್ತಿದ್ದ ವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡುವಾಗ ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಬೀಟಿ (ತೇಗ) ಮರ ಸಾಗಣೆ ಮಾಡುವುದನ್ನು ಪತ್ತೆ ಮಾಡಿದ್ದಾರೆ.

ತಪಾಸಣೆಯ ಸಮಯದಲ್ಲಿ, KA 13 AA 0769 ನೋಂದಣಿ ಸಂಖ್ಯೆಯನ್ನು ಹೊಂದಿರುವ ವಾಹನವು ಅಕ್ರಮವಾಗಿ ಮರವನ್ನು ಸಾಗಿಸುತ್ತಿರುವುದು ಅಧಿಕಾರಿಗಳಿಗೆ ಕಂಡುಬಂದಿದೆ. ಬೀಟಿ ಮರವನ್ನು ವಾಹನದ ಮೇಲ್ಬಾಗದಲ್ಲಿ ಟಾರ್ಪಲ್ ಹಾಕಿ ಭತ್ತದ ಹೊಟ್ಟು ಇರುವ ಚೀಲಗಳ ಕೆಳಗೆ ಮರೆ ಮಾಡಲಾಗಿತ್ತು. ಒಟ್ಟು 25 ಬೀಟಿ ಮರದ ತುಂಡುಗಳು ಚೀಲಗಳ ಕೆಳಗೆ ಅಡಗಿರುವುದು ಕಂಡುಬಂದಿದೆ.
ಅರಣ್ಯ ಇಲಾಖೆಯು ವಾಹನ ಚಾಲಕ ನಾಪೋಕ್ಲುವಿನ ಬಿ.ಎಂ. ಸಜನ್ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿತು, ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಮತ್ತೊಬ್ಬ ಪ್ರಮುಖ ಆರೋಪಿಯನ್ನು ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಅಬ್ದುಲ್ ಅಬ್ದುಟ್ಟಿ ಎಂದು ಗುರುತಿಸಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮಡಿಕೇರಿ ಪ್ರಾದೇಶಿಕ ವಿಭಾಗ ಮತ್ತು ಮಡಿಕೇರಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಜನವರಿ 15 ರ ರಾತ್ರಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ವಲಯ ಅರಣ್ಯ ಅಧಿಕಾರಿ ನೇತೃತ್ವದಲ್ಲಿ ಸಂಪಾಜೆ ಅರಣ್ಯ ತನಿಖಾ ಠಾಣೆಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಡಿನ್ನಿ ದೇಚಮ್ಮ, ಉಪ ವಲಯ ಅರಣ್ಯ ಅಧಿಕಾರಿ ಸಂದೀಪ್ ಗೌಡ, ಅರಣ್ಯ ರಕ್ಷಕರಾದ ಕಾರ್ತಿಕ್ ಡಿ, ನಾಗರಾಜ್ ಎಸ್ ಮತ್ತು ಸಿದ್ದರಾಮ ನಟಕರ್, ಮತ್ತು ಇಲಾಖಾ ವಾಹನ ಚಾಲಕ ಭುವನೇಶ್ವರ್ ಮತ್ತು ತನಿಖಾ ಠಾಣೆಯ ಸಿಬ್ಬಂದಿ ರಾಜೇಶ್ ಭಾಗವಹಿಸಿದ್ದರು.