Karavali
ಮಂಗಳೂರು ನಗರಕ್ಕೆ ಬೈಪಾಸ್ ಸಹಿತ ದ.ಕ.ದ ಪ್ರಮುಖ ಹೆದ್ದಾರಿ ಯೋಜನೆಗಳ ಡಿಪಿಆರ್ ತಯಾರಿಕೆಗೆ ಕೇಂದ್ರ ಅನುಮೋದನೆ
- Wed, Jan 14 2026 09:41:48 PM
-
ಮಂಗಳೂರು, ಜ. 14 (DaijiworldNews/AA): ಕರಾವಳಿ ಕರ್ನಾಟಕದ ರಸ್ತೆ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿ, ಮಂಗಳೂರು ಬೈಪಾಸ್ ಮೂಲಕ ಹಾದು ಹೋಗುವ ಸುರತ್ಕಲ್-ಬಿ.ಸಿ.ರೋಡ್ ಹೆದ್ದಾರಿ ಅಗಲೀಕರಣ ಹಾಗೂ ತಲಪಾಡಿಯಿಂದ ಕುಂದಾಪುರದವರೆಗಿನ ಎನ್ಹೆಚ್-66ರ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲು ಇದೀಗ ಅನುಮೋದನೆ ದೊರೆತಿದೆ. ಆ ಮೂಲಕ, ಕರಾವಳಿ ಜನರ ಬಹು ದಿನಗಳ ಬೇಡಿಕೆ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಅವಿರತ ಪರಿಶ್ರಮಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಿದೆ.

ಈ ಹೆದ್ದಾರಿಗಳು ಮಂಗಳೂರು ನಗರ ಪ್ರವೇಶಿಸುವ ಹೆಬ್ಬಾಗಿಲಾಗಿ ಪ್ರತಿನಿತ್ಯವೂ ನೂರಾರು ಪ್ರಯಾಣಿಕರ ಸಂಚಾರಕ್ಕೆ ಪ್ರಮುಖ ಸಂಪರ್ಕ ರಸ್ತೆಗಳಾಗಿವೆ. ಜತೆಗೆ, ಕರಾವಳಿಯ ವಾಣಿಜ್ಯ ಚಟುವಟಿಕೆಗಳ ಹಬ್ ಆಗಿರುವ ಬಂದರಿಗೆ ಸರಕು ಸಾಗಣೆ ಹಾಗೂ ಭಾರೀ ವಾಹನಗಳ ಓಡಾಟಕ್ಕೂ ಪ್ರಮುಖ ಸಂಪರ್ಕ ಕೊಂಡಿಯಾಗಿ ಈ ಹೆದ್ದಾರಿಗಳು ಗುರುತಿಸಿಕೊಂಡಿವೆ. ಆದರೆ, ಬಿಸಿ ರೋಡ್-ಸುರತ್ಕಲ್ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಜತೆಗೆ ತಲಪಾಡಿಯಿಂದ ಕುಂದಾಪುರದವರೆಗೆ ಸರ್ವೀಸ್ ರಸ್ತೆ ನಿರ್ಮಿಸಬೇಕೆಂಬುದು ಈ ಭಾಗದ ಜನರ ಪ್ರಮುಖ ಬೇಡಿಕೆ ಕೂಡ ಆಗಿತ್ತು.
ಅದರಂತೆ ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸಂಸದ ಕ್ಯಾ. ಚೌಟ ಅವರು ಅಧಿಕಾರ ಸ್ವೀಕರಿಸಿದ ಬಳಿಕಧೀರ್ಘಕಾಲದಿಂದ ಬಾಕಿಯಿದ್ದ ಯೋಜನೆಗೆ ಅನುಮೋದನೆ ಪಡೆದು ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ನಿರಂತರ ಪ್ರಯತ್ನ ನಡೆಸಿದ್ದರು. 2024ರ ಜೂನ್ನಲ್ಲಿ ನಡೆದ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿನಯ್ ಕುಮಾರ್ ಅವರನ್ನು ಭೇಟಿಯಾಗಿ, ಬಿ.ಸಿ.ರೋಡ್ನಿಂದ ಸುರತ್ಕಲ್ವರೆಗಿನ ಎನ್ಹೆಚ್-66ರಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವುದರ ಅಗತ್ಯತೆಯನ್ನು ಗಮನಕ್ಕೆ ತಂದಿದ್ದರು. ಬಳಿಕ 2024ರ ಸೆಪ್ಟೆಂಬರ್ 13ರಂದು ಮಂಗಳೂರಿನಲ್ಲಿ ನಡೆದ 'ದಿಶಾ' ಸಮಿತಿ ಸಭೆಯಲ್ಲಿ ಮಂಗಳೂರು ಬೈಪಾಸ್ ಯೋಜನೆಯನ್ನು ಆದ್ಯತೆ ಮೇರೆಗೆ ಪ್ರಸ್ತಾಪಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸ್ಪಷ್ಟ ಕ್ರಮಕ್ಕೆ ಒತ್ತಾಯಿಸಿದ್ದರು. ಅಲ್ಲದೆ, ಈ ವಿಷಯಗಳ ಕುರಿತು ಕ್ಯಾಪ್ಟನ್ ಚೌಟ ಅವರು ಎನ್ಹೆಚ್ಎ ನ ಪ್ರಾದೇಶಿಕ ಅಧಿಕಾರಿಗಳಿಗೂ 2024ರ ಅಕ್ಟೋಬರ್ನಲ್ಲಿ ಪತ್ರವನ್ನು ಬರೆದು ಒತ್ತಾಯಿಸಿದ್ದರು.
ಹೀಗೆ, ಸಂಸದರ ಕಚೇರಿಯ ನಿರಂತರ ಫಾಲೋಅಪ್ನ ಫಲವಾಗಿ ಇದೀಗ ಈ ಪ್ರಮುಖ ಬೇಡಿಕೆಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಡಿಪಿಆರ್ ತಯಾರಿಕೆಗೆ ಹೆದ್ದಾರಿ ಸಚಿವಾಲಯದಿಂದ ಅನುಮೋದನೆ ದೊರೆತಿದೆ. ಆ ಮೂಲಕ ಡಿಪಿಆರ್ ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕನ್ಸೆಲ್ಟೆಂಟ್ಗಳಿಗೆ ಕೆಲಸ ಪ್ರಾರಂಭಿಸುವುದಕ್ಕೆ ಅಧಿಕೃತ ನೋಟಿಸ್ ನೀಡಲಾಗಿದೆ. ಡಿಪಿಆರ್ನಲ್ಲಿ ರಸ್ತೆ ಅಲೈನ್ಮೆಂಟ್, ಸರ್ವೀಸ್ ರಸ್ತೆ, ಗ್ರೇಡ್ ಸೆಪರೇಟೆಡ್ ಜಂಕ್ಷನ್ಗಳು, ಹೆದ್ದಾರಿಯ ಸಾಮರ್ಥ್ಯ ವೃದ್ಧಿ, ರಸ್ತೆ ಸುರಕ್ಷತೆ ಹಾಗೂ ದೀರ್ಘಾವಧಿಯ ಸಂಚಾರ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಲಾಗುತ್ತದೆ.
ಡಿಪಿಆರ್ಗೆ ಅನುಮೋದನೆ ಲಭಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, "ಇದು ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪ್ರಮುಖ ಬೇಡಿಕೆ ಈಡೇರಿಸುವಲ್ಲಿ ಸುವ್ಯವಸ್ಥಿತವಾದ ಯೋಜನೆಯತ್ತ ಸಾಗುವ ಮಹತ್ವದ ಮೈಲಿಗಲ್ಲು ಆಗಿದೆ. ಈ ಡಿಪಿಆರ್ ಅನುಮೋದನೆಯಿಂದ ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ತಾಂತ್ರಿಕ ಮತ್ತು ಆಡಳಿತಾತ್ಮಕ ನೆಲೆ ಸಿದ್ಧವಾಗಲಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಈ ಭಾಗದ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದಕ್ಕೆ ಡಿಪಿಆರ್ ಅನುಮೋದಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಜತೆಗೆ ಬಂದರು ಆಧಾರಿತ ಅಭಿವೃದ್ಧಿ, ಪ್ರಯಾಣಿಕರ ಸುರಕ್ಷತೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಆತ್ಮನಿರ್ಭರ, ವಿಕಸಿತ ಭಾರತ ಕನಸು ನನಸುಗೊಳಿಸುವಲ್ಲಿ ಈ ಯೋಜನೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಕ್ಯಾಪ್ಟನ್ ಚೌಟ ಹೇಳಿದ್ದಾರೆ.
ಮಂಗಳೂರು ನಗರಕ್ಕೆ ಬೈಪಾಸ್
ಬಿಸಿ ರೋಡ್ನಿಂದ ಪಡೀಲ್-ನಂತೂರು ವೃತ್ತದ ಮೂಲಕ ಹಾದು ಹೋಗುವ ಈ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವುದರಿಂದ ಮಂಗಳೂರು ನಗರಕ್ಕೂ ಬೈಪಾಸ್ ರಸ್ತೆಯ ಅನುಕೂಲ ದೊರೆಯಲಿದೆ. ಈ ಯೋಜನೆಯಡಿ ಮಂಗಳೂರು ಬೈಪಾಸ್ ಅಭಿವೃದ್ಧಿಯಾಗುವುದರಿಂದ ನಂತೂರು ಭಾಗದ ವಾಹನ ದಟ್ಟನೆ ಹಾಗೂ ಇತರೆ ಕೆಲವೊಂದು ಸಂಚಾರ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರೆಯಲಿದೆ.ಸುರತ್ಕಲ್-ಬಿಸಿರೋಡ್ ಹೆದ್ದಾರಿ ಮೇಲ್ದರ್ಜೆಗೆ
ಸುರತ್ಕಲ್-ಬಿಸಿ ರೋಡ್ವರೆಗಿನ ಹೆದ್ದಾರಿ ವ್ಯಾಪ್ತಿಯು ಕ್ಯಾ.ಚೌಟ ಅವರ ಸತತ ಪ್ರಯತ್ನದ ಫಲವಾಗಿ ಈಗಾಗಲೇ ಎನ್ಎಚ್ಎಲ್ಎಂಎಲ್ ವ್ಯಾಪ್ತಿಯಿಂದ ಎನ್ಹೆಚ್ಎಐಗೆ ಹಸ್ತಾಂತರಗೊಂಡಿದೆ. ಇದೀಗ ಈ ಹೆದ್ದಾರಿಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸುವ ಜತೆಗೆ ರಸ್ತೆ ಸುರಕ್ಷತಾ ವ್ಯವಸ್ಥೆ ಅಳವಡಿಸುವ ಹಿನ್ನಲೆಯಲ್ಲಿ ಡಿಪಿಆರ್ ಅನುಮೋದನೆಯು ಮಹತ್ವದ ಹೆಜ್ಜೆಯಾಗಿದೆ. ಈ ಹೆದ್ದಾರಿ ಅಗಲೀಕರಣವಾಗದೆ ಸಾಕಷ್ಟು ಸಂಚಾರ ದಟ್ಟನೆಗೂ ಕಾರಣವಾಗಿದೆ. ಜತೆಗೆ, ಬಂದರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಾದ ಕಾರಣ ಸರಕು ವಾಹನಗಳ ಸುಗಮ ಸಂಚಾರಕ್ಕೂ ಸವಾಲುಗಳು ಎದುರಾಗುತ್ತಿವೆ. ಹೀಗಿರುವಾಗ, ಸುರತ್ಕಲ್-ಬಿಸಿ ರೋಡ್ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಈ ಡಿಪಿಆರ್ ಅನುಮೋದನೆಯಿಂದ ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರೆಯಲಿದೆ.ತಲಪಾಡಿಯಿಂದ ಕುಂದಾಪುರದವರೆಗೆ ಸರ್ವೀಸ್ ರಸ್ತೆ
ಈ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ತಲಪಾಡಿಯಿಂದ ಕುಂದಾಪುರದವರೆಗೆ ಹೊಸದಾಗಿ ಪ್ರತ್ಯೇಕ ಸರ್ವೀಸ್ ರಸ್ತೆ ನಿರ್ಮಾಣವಾಗಲಿದೆ. ಪ್ರಸ್ತುತ ಈ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆಯಿಲ್ಲದ ಕಾರಣ ಸ್ಥಳೀಯರಿಗೂ ಹಾಗೂ ಇತರೆ ಸಾರ್ವಜನಿಕರಿಗೂ ಸಾಕಷ್ಟು ಅನಾನುಕೂಲವಾಗುತ್ತಿದ್ದು, ರಸ್ತೆ ಸುರಕ್ಷತೆಗೂ ಹತ್ತಾರು ಸವಾಲುಗಳು ಎದುರಾಗಿವೆ. ಈಗ ಡಿಪಿಆರ್ ಅನುಮೋದನೆಯಿಂದ ಎಲ್ಲ ಸಮಸ್ಯೆಗಳಿಗೂ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗಿದೆ.ಬೈಕಂಪಾಡಿಯಲ್ಲಿ ಎಲಿವೇಟೆಡ್ ರಸ್ತೆ
ಈ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಈಗಾಗಲೇ ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆಯಿಂದ ಬೈಕಂಪಾಡಿವರೆಗೆ ಎಲಿವೇಟೆಡ್ ರಸ್ತೆ ಕೂಡ ನಿರ್ಮಾಣವಾಗಲಿದೆ. ಈ ಯೋಜನೆಗೆ ಈಗಾಗಲೇ ಡಿಪಿಆರ್ ತಯಾರು ಆಗಿದ್ದು, ಟೆಂಡರ್ ಹಂತಕ್ಕೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಈ ಎಲ್ಲ ಹೆದ್ದಾರಿ ಯೋಜನೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಈ ಡಿಪಿಆರ್ ಅನುಮೋದನೆಯು ಮಹತ್ವದ ಹೆಜ್ಜೆಯಾಗುವ ಮೂಲಕ ಕರಾವಳಿಯ ಮೂಲಸೌಕರ್ಯ ಸುಧಾರಣೆಗೆ ಹೆಚ್ಚಿನ ಬಲ ದೊರೆಯಲಿದೆ.Glad to share that long-pending DPRs for the Mangaluru Bypass and the Surathkal–B.C. Road upgradation have been sanctioned, along with service roads on NH-66 from Talapady to Kundapur.
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) January 14, 2026
These interventions address a critical highway corridor that serves as a key entry point into… pic.twitter.com/pzysWoZ2f7