ಉಡುಪಿ, ಜ. 14 (DaijiworldNews/AA): ಉಡುಪಿ ರೈಲ್ವೆ ನಿಲ್ದಾಣದ ಪ್ರಯಾಣಿಕರ ದೀರ್ಘಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಜಿಲ್ಲಾಡಳಿತದ ಸಹಯೋಗದೊಂದಿಗೆ ಸುಮಾರು 2.40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪ್ರಯಾಣಿಕರ ಸೌಲಭ್ಯಗಳನ್ನು ಜನವರಿ 14 ರಂದು ಲೋಕಾರ್ಪಣೆಗೊಳಿಸಲಾಗಿದೆ.




ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಉಡುಪಿ ರೈಲ್ವೆ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾದ ನೂತನ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, "ಅಮೃತ್ ಭಾರತ್ ರೈಲ್ವೆ ನಿಲ್ದಾಣ ಯೋಜನೆಯಡಿ ಉಡುಪಿ ರೈಲ್ವೆ ನಿಲ್ದಾಣಕ್ಕೆ ಸಂಪೂರ್ಣ ಕಾಯಕಲ್ಪ ನೀಡಲಾಗಿದೆ. ಈಗ ಇದು ಕರಾವಳಿ ಭಾಗದ ಜನರಿಗೆ ಹೊಸ ಮತ್ತು ಆಧುನಿಕ ರೂಪದೊಂದಿಗೆ ಲಭ್ಯವಾಗಲಿದೆ" ಎಂದರು.
"ಕರಾವಳಿ ಜಿಲ್ಲೆಗಳ ರೈಲ್ವೆ ನಿಲ್ದಾಣಗಳ ಮೇಲ್ದರ್ಜೆಗೇರಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 100 ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಮೊದಲ ಹಂತದಲ್ಲಿ 2.6 ಕೋಟಿ ರೂ. ವೆಚ್ಚದಲ್ಲಿ ಪ್ಲಾಟ್ಫಾರ್ಮ್ ಸಂಖ್ಯೆ 2 ಅನ್ನು ಅಭಿವೃದ್ಧಿಪಡಿಸಲಾಗುವುದು. ಹಿರಿಯ ನಾಗರಿಕರ ಅನುಕೂಲಕ್ಕಾಗಿ ನಿಲ್ದಾಣದಲ್ಲಿ ಮೂರು ಲಿಫ್ಟ್ಗಳನ್ನು ಅಳವಡಿಸಲಾಗುವುದು" ಎಂದು ತಿಳಿಸಿದರು.
"ಬಾರ್ಕೂರು ಮತ್ತು ಮುಲ್ಕಿ ರೈಲ್ವೆ ಪ್ಲಾಟ್ಫಾರ್ಮ್ಗಳನ್ನು 4.28 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 105 ಕೋಟಿ ರೂ. ವೆಚ್ಚದಲ್ಲಿ ೧೦ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದಿಂದ ಅನುಮೋದನೆ ಸಿಗಲಿದೆ" ಎಂದು ಸಂಸದರು ಹೇಳಿದರು.
"ಮಂಗಳೂರಿನಿಂದ ಕಾರವಾರದವರೆಗೆ ರೈಲ್ವೆ ಹಳಿ ದ್ವಿಗುಣಗೊಳಿಸುವುದು ತುರ್ತು ಅಗತ್ಯವಾಗಿದ್ದು, ಈ ಬಗ್ಗೆ ಸವಿಸ್ತಾರ ಯೋಜನಾ ವರದಿಯನ್ನು ಕೇಂದ್ರ ಸಚಿವರಿಗೆ ಸಲ್ಲಿಸಲಾಗುವುದು. ಇದರೊಂದಿಗೆ ಮಡಗಾಂವ್-ಮಂಗಳೂರು ವಂದೇ ಭಾರತ್ ರೈಲನ್ನು ಮುಂಬೈವರೆಗೆ ಹಾಗೂ ಬೆಂಗಳೂರು-ಮಂಗಳೂರು ರೈಲನ್ನು ಕಾರವಾರದವರೆಗೆ ವಿಸ್ತರಿಸುವುದರಿಂದ ಕರಾವಳಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೊಂಕಣ ರೈಲ್ವೆ ಜೊತೆ ಚರ್ಚಿಸಿ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲಾಗುವುದು. ಅಲ್ಲದೆ, ಉಡುಪಿ ರೈಲ್ವೆ ನಿಲ್ದಾಣಕ್ಕೆ 'ಶ್ರೀ ಕೃಷ್ಣ ರೈಲ್ವೆ ನಿಲ್ದಾಣ' ಎಂದು ಮರುನಾಮಕರಣ ಮಾಡಲು ಪ್ರಯತ್ನಿಸಲಾಗುವುದು" ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕೊಂಕಣ ರೈಲ್ವೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ, ಕಾರವಾರ ವಿಭಾಗದ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.