ಮಂಗಳೂರು, ಜ. 05 (DaijiworldNews/AK): ಖಾಸಗಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದ ಘಟನೆ ಪಂಗಾಲದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ನಡೆದಿದೆ.




ಮೃತ ವ್ಯಕ್ತಿಯನ್ನು ಪಡುಕೆರೆ ನಿವಾಸಿ ಕೃಷ್ಣ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಕೃಷ್ಣ ಅವರು ಪಂಗಳ ಬಳಿಯ ಸರ್ವಿಸ್ ರಸ್ತೆಯಿಂದ ಹೆದ್ದಾರಿಯ ಕಡೆಗೆ
ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ, ಉಡುಪಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ಪರಿಣಾಮವಾಗಿ ಸ್ಕೂಟರ್ ಸವಾರನಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಕೊನೆಯುಸಿರೆಳೆದರು.
ಅಪಘಾತದಿಂದಾಗಿ ಬಸ್ ರಸ್ತೆಯ ಮಧ್ಯದಲ್ಲಿಯೇ ನಿಂತಿದ್ದರಿಂದ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಯಿತು. ಸ್ಥಳದಲ್ಲಿದ್ದ NSUI ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಸಂಚಾರ ಸುಗಮಗೊಳಿಸಲು ಬಸ್ ಅನ್ನು ರಸ್ತೆಬದಿಗೆ ಸ್ಥಳಾಂತರಿಸುವಲ್ಲಿ ಸಹಾಯ ಮಾಡಿದರು. ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.