ಉಡುಪಿ, ಜ. 05 (DaijiworldNews/TA): ಉಡುಪಿ ಶ್ರೀಕೃಷ್ಣ ಮಠದ ಭಕ್ತರೊಬ್ಬರು ಶ್ರೀಕೃಷ್ಣನಿಗೆ ಚಿನ್ನದ ಭಗವದ್ಗೀತೆ ಅರ್ಪಿಸಲು ಮುಂದಾಗಿದ್ದಾರೆ. ಈ ವಿಶಿಷ್ಟ ಸಮರ್ಪಣೆ ಜನವರಿ 8ರಂದು ನಡೆಯಲಿರುವ ವಿಶ್ವಗೀತಾ ಪರ್ಯಾಯ ಸಮಾರೋಪ ವಿಶೇಷ ಕಾರ್ಯಕ್ರಮದಂದು ಶ್ರೀಕೃಷ್ಣ ಸನ್ನಿಧಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.

ದೆಹಲಿಯ ಭಕ್ತರೊಬ್ಬರು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಈ ಚಿನ್ನದ ಭಗವದ್ಗೀತೆಯನ್ನು ನಿರ್ಮಿಸಿದ್ದಾರೆ. ಶುದ್ಧ ಚಿನ್ನದ ಹಾಳೆಯಲ್ಲಿ ಭಗವದ್ಗೀತೆಯ 18 ಅಧ್ಯಾಯಗಳಲ್ಲಿನ 700 ಶ್ಲೋಕಗಳನ್ನು ಸೂಕ್ಷ್ಮವಾಗಿ ಮುದ್ರಿಸಲಾಗಿದ್ದು, ಇದು ಧಾರ್ಮಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ಅತ್ಯಂತ ಅಪರೂಪದ ಕೃತಿಯಾಗಿದೆ. ಭಗವದ್ಗೀತೆಯ ಈ ಚಿನ್ನದ ಪ್ರತಿಯನ್ನು ವಿಶೇಷವಾಗಿ ತಯಾರಿಸಲಾದ ಚಿನ್ನದ ರಥದಲ್ಲಿ ಮೆರವಣಿಗೆ ಮೂಲಕ ಶ್ರೀಕೃಷ್ಣನಿಗೆ ಅರ್ಪಿಸಲಾಗುವುದು.
ವಿಶ್ವಗೀತಾ ಪರ್ಯಾಯ ಸಮಾರೋಪದ ಅಂಗವಾಗಿ ನಡೆಯುವ ಈ ಕಾರ್ಯಕ್ರಮಕ್ಕೆ ದೇಶದ ಹಲವು ಗಣ್ಯರು ಆಗಮಿಸಲಿದ್ದಾರೆ. ಅಯೋಧ್ಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಅನೇಕ ಗಣ್ಯರು ಮತ್ತು ಧಾರ್ಮಿಕ ಮುಖಂಡರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಭಗವದ್ಗೀತೆ ವಿಶ್ವಮಾನವತೆಗೆ ಮಾರ್ಗದರ್ಶನ ನೀಡುವ ಶಾಶ್ವತ ಗ್ರಂಥವಾಗಿದ್ದು, ಅದನ್ನು ಚಿನ್ನದ ರೂಪದಲ್ಲಿ ಶ್ರೀಕೃಷ್ಣನಿಗೆ ಸಮರ್ಪಿಸುವುದು ಭಕ್ತಿ, ಸಂಸ್ಕೃತಿ ಮತ್ತು ಪರಂಪರೆಯ ವಿಶಿಷ್ಟ ಸಂಗಮವಾಗಿ ಕಾಣುತ್ತಿದೆ. ಉಡುಪಿ ಶ್ರೀಕೃಷ್ಣ ಮಠದ ಇತಿಹಾಸದಲ್ಲಿ ಈ ಚಿನ್ನದ ಭಗವದ್ಗೀತೆ ಅರ್ಪಣೆ ಒಂದು ಮಹತ್ವದ ಹಾಗೂ ಸ್ಮರಣೀಯ ಘಟನೆಯಾಗಿ ದಾಖಲಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.