ಬಂಟ್ವಾಳ, ಜ. 04 (DaijiworldNews/AA): ವಿಟ್ಲ ವ್ಯಾಪ್ತಿಯ ಅಳಿಕೆ ಗ್ರಾಮದ ಅಡಲ ಎಂಬಲ್ಲಿ ರಸ್ತೆಯ ಮೇಲೆ ಹಾಕಲಾಗಿದ್ದ ಮಣ್ಣಿನಲ್ಲಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಸ್ಕಿಡ್ ಆದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.

ಅಳಿಕೆ ಬಿಟ್ಟಿಮೂಲೆ ನಿವಾಸಿ ಜಯರಾಮ (44) ಮತ್ತು ಅವರ ಪುತ್ರ ನಿಖಿಲ್ (10) ಗಾಯಗೊಂಡವರು. ಇಬ್ಬರಿಗೂ ತಲೆ ಮತ್ತು ಕೈಗಳಿಗೆ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೈಪ್ಲೈನ್ ಅಳವಡಿಸಲು ಸುಮಾರು ಒಂದು ವಾರದ ಹಿಂದೆ ರಸ್ತೆಯ ಬದಿಯಲ್ಲಿ ಗುಂಡಿ ತೆಗೆಯಲಾಗಿತ್ತು. ಕಾಮಗಾರಿಗಾಗಿ ತೆಗೆದ ಮಣ್ಣನ್ನು ರಸ್ತೆಯ ಅರ್ಧ ಭಾಗದವರೆಗೆ ಹಾಕಲಾಗಿತ್ತು. ಬೈಕ್ ಸವಾರರು ಈ ಮಣ್ಣಿನ ಮೇಲೆ ಸಂಚರಿಸುವಾಗ ವಾಹನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.
ಅಪೂರ್ಣಗೊಂಡ ಕಾಮಗಾರಿ ಹಾಗೂ ರಸ್ತೆಯಲ್ಲಿ ಹರಡಿಕೊಂಡಿರುವ ಮಣ್ಣಿನಿಂದಾಗಿ ಸಾರ್ವಜನಿಕರು ಮತ್ತು ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.