ಉಡುಪಿ, ಜ. 02 (DaijiworldNews/AA): ಕಾರೊಂದನ್ನು ರಿವರ್ಸ್ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಗಾಯಗೊಂಡಿರುವ ಘಟನೆ ಉಡುಪಿಯ ಜಾಮಿಯಾ ಮಸೀದಿ ಸಮೀಪದ ಐರೋಡಿ ಬಿಲ್ಡಿಂಗ್ ಬಳಿ ಸಂಭವಿಸಿದೆ.


ಐರೋಡಿ ಬಿಲ್ಡಿಂಗ್ ಬಳಿ ನಿಲ್ಲಿಸಲಾಗಿದ್ದ ಕಾರನ್ನು ರಿವರ್ಸ್ ಮಾಡುವಾಗ ಈ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಅತೀ ವೇಗವಾಗಿ ಹಿಮ್ಮುಖವಾಗಿ ಚಲಿಸಿ 'ಪರಿವಾರ್ ಸ್ವೀಟ್ಸ್' ಅಂಗಡಿಯತ್ತ ನುಗ್ಗಿದೆ. ಈ ಸಂದರ್ಭದಲ್ಲಿ ಸಿಟಿ ಸೆಂಟರ್ ರಸ್ತೆಯಿಂದ ಸಂಸ್ಕೃತ ಕಾಲೇಜಿನತ್ತ ಸಾಗುತ್ತಿದ್ದ ಬೈಕ್ ಮತ್ತು ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಮತ್ತು ಆಟೋ ಚಾಲಕ ಗಾಯಗೊಂಡಿದ್ದಾರೆ. ಬೈಕ್ ಮತ್ತು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಇತರ ವಾಹನಗಳಿಗೂ ಗುದ್ದಿ, ಅಂತಿಮವಾಗಿ ಸಮೀಪದ ಚಿಪ್ಸ್ ಅಂಗಡಿಯೊಂದಕ್ಕೆ ನುಗ್ಗಿ ನಿಂತಿದೆ. ಇನ್ನು ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.