ಮಂಗಳೂರು, ಜ.01 (DaijiworldNews/AK): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ-ಕೈಗಾರಿಕಾ ಕ್ರಾಂತಿ ನಡೆಸಿದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಅವರ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ವಿನಯ್ ಹೆಗ್ಡೆ ಅವರು ಶಿಕ್ಷಣ ತಜ್ಞ ಮಾತ್ರವಲ್ಲದೆ ಉದ್ಯಮಿ, ಸಮಾಜ ಸೇವಕರಾಗಿ ಹೆಸರು ಪಡೆದಿದ್ದರು. ಅವರು ನಿಟ್ಟೆ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು. ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್ ಸಹಿತ ಹಲವು ಗೌರವಗಳಿಗೆ ಭಾಜನರಾಗಿದ್ದರು. 1979ರಲ್ಲಿ ‘ನಿಟ್ಟೆ ಎಜುಕೇಶನ್ ಟ್ರಸ್ಟ್’ ಸ್ಥಾಪಿಸಿ ಈ ಶಿಕ್ಷಣ ಸಂಸ್ಥೆಗಳನ್ನು ಮಂಗಳೂರು, ಬೆಂಗಳೂರು ಮತ್ತು ನಿಟ್ಟೆಯಲ್ಲಿ ಒಟ್ಟು 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಗ್ರಾಮೀಣ ಭಾಗದ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್, ದಂತ ವೈದ್ಯಕೀಯ, ಫಾರ್ಮಸಿ ಮತ್ತು ಮ್ಯಾನೇಜ್ಮೆಂಟ್ ಶಿಕ್ಷಣ ಪಡೆಯುವಲ್ಲಿ ವಿನಯ್ ಹೆಗ್ಡೆಯವರ ಪಾತ್ರ ಹಿರಿದು. ಕೈಗಾರಿಕಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಹೆಗ್ಡೆಯವರು ಲೆಮಿನಾ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಇದು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆಯಲ್ಲಿ ಪ್ರಮುಖ ಸಂಸ್ಥೆಯಾಗಿದ್ದು ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಮಂಜುನಾಥ ಭಂಡಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.