ಬಂಟ್ವಾಳ, ಡಿ. 31 (DaijiworldNews/TA): ಬೆಂಗಳೂರು ಫಕೀರ್ ಲೇಔಟ್ ನಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಹಾಗೂ ಬಡವರ ಮೇಲೆ ನಡೆಯುತ್ತಿರುವ ಬುಲ್ಡೋಜರ್ ರಾಜಕೀಯವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬುಧವಾರ ಬಂಟ್ವಾಳ ಬಿ.ಸಿ.ರೋಡ್ ಕೈಕಂಬ ಜಂಕ್ಷನ್ ನಲ್ಲಿ ನಡೆದ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ, ಡಿಜೆ ಹಾಕಿ ಕುಣಿಯುವ ಹಾಗೂ ಅಕ್ರಮ ಕೋಳಿ ಅಂಕ ನಡೆಸುವ ಸಂದರ್ಭಗಳಲ್ಲಿ ಅದನ್ನು ತಡೆಯಲು ಬಂದ ಪೊಲೀಸರ ಕಾಲರ್ ಗೆ ಕೈ ಹಾಕಲು ಪ್ರಚೋದನೆ ನೀಡುವ ಶಾಸಕರು ಒಂದು ಕಡೆ ಇದ್ದರೆ, ಬಡವರು, ಬಾಣಂತಿಯರು ಹಾಗೂ ವೃದ್ಧರು ವಾಸಿಸುವ ಫಕೀರ್ ಕಾಲೋನಿಯಲ್ಲಿ ರಾತ್ರೋರಾತ್ರಿ ಬುಲ್ಡೋಜರ್ ಕಾರ್ಯಾಚರಣೆ ನಡೆಯುವಾಗ ಅದನ್ನು ತಡೆಯಲು ತಾಕತ್ತಿರುವ ಶಾಸಕರು ಇಲ್ಲದಿರುವುದು ಪ್ರಜಾಪ್ರಭುತ್ವದ ದುರಂತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಗೆ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್ ನೇತೃತ್ವ ವಹಿಸಿದ್ದರು. ಪ್ರತಿಭಟನೆಯ ಅಧ್ಯಕ್ಷೀಯ ಭಾಷಣವನ್ನು ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್ ಮಾಡಿದರು.