ಮಂಗಳೂರು, ಡಿ. 31 (DaijiworldNews/TA): ಕೋಗಿಲು ಬಡಾವಣೆಯಲ್ಲಿ 2023ರವರೆಗೆ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ವಸತಿಗಳು ಇರಲಿಲ್ಲ. 2023ಕ್ಕೂ ಹಿಂದಿನ ಗೂಗಲ್ ಮ್ಯಾಪ್ ನಲ್ಲಿ ಅಲ್ಲಿ ಬೆರಳೆಣಿಕೆಯ ಮನೆಗಳಿದ್ದುದು ಕಾಣಿಸುತ್ತದೆ. ಸಚಿವ ಜಮೀರ್ ಅವರ ಗ್ಯಾಂಗ್ ಅಕ್ರಮ ವಲಸಿಗರನ್ನು ಅಲ್ಲಿ ಕರೆತಂದು ಕೂರಿಸಿದೆ. ಅಲ್ಲಿನ ಎಲ್ಲಾ ಜಾಗವನ್ನು ಒತ್ತುವರಿ ಮಾಡಲಾಗಿದೆ. ಇದರ ಹಿಂದೆ ದೊಡ್ಡ ಪಿತೂರಿ ನಡೆದಿದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಆರೋಪಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರು ಎಲ್ಲಿಯವರು, ಇಲ್ಲಿ ಬಂದು ನೆಲೆಸಿದ ಕಾರಣ ಸೇರಿ ಸಮಗ್ರ ತನಿಖೆಯಾಗಬೇಕು. ಇದಕ್ಕಾಗಿ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಬೇಕು. ಅಲ್ಲಿ ಒಕ್ಕಲೆಬ್ಬಿಸಿದವರಿಂದ ಯಾವುದೇ ದಾಖಲೆ ಪತ್ರವನ್ನು ಕೇಳದೆಯೇ ಅವರಿಗೆ ನಾಲ್ಕೈದು ಕಿ.ಮೀ ದೂರದಲ್ಲಿ ಪುನರ್ವಸತಿ ಕಲ್ಪಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಬೆಳವಣಿಗೆಗಳ ಹಿಂದೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಕೈವಾಡ ಇದೆ.
ಅಕ್ರಮ ವಲಸಿಗರಿಗೆ ವಸತಿ ಕಲ್ಪಿಸುವುದರ ಹಿಂದೆ ಕೇರಳದ ರಾಜಕೀಯ ಒತ್ತಡ ಕೆಲಸ ಮಾಡಿದೆ. ಎರಡೂವರೆ ವರ್ಷದಲ್ಲಿ ರಾಜ್ಯದ ಬಡವರಿಗೆ ಸರ್ಕಾರ ಒಂದೇ ಒಂದು ಮನೆ ಕೊಟ್ಟಿಲ್ಲ. ನಗರದಲ್ಲಿ ವಸತಿ ಜಮೀನಿಗಾಗಿ ನಮೂನೆ 94 ಸಿ ಮತ್ತು 94 ಸಿ.ಸಿ ಅಡಿ ಅರ್ಜಿ ಸಲ್ಲಿಸಲಿಕ್ಕೂ ಅವಕಾಶ ಕಲ್ಪಿಸಿಲ್ಲ. ನಮ್ಮ ರಾಜ್ಯದವರ ಪರಿಸ್ಥಿತಿ ಹೀಗಿರುವಾಗ ಹೊರರಾಜ್ಯದ ಅಕ್ರಮ ವಲಸಿಗರಿಗೆ ಮನೆ ಕಟ್ಟಿಕೊಡುವ ಔಚಿತ್ಯವಾದರೂ ಏನು’ ಎಂದು ಅವರು ಪ್ರಶ್ನಿಸಿದರು.