ಬಂಟ್ವಾಳ, ಡಿ. 28 (DaijiworldNews/AA): ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ಹಾಗೂ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು ಮತ್ತು ಸದಸ್ಯರು ಭಾನುವಾರ ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶವಾದ ಕಾಯರ್ ಪಲ್ಕೆ ಸಮೀಪದ ನಮ್ಮನೆ ಚಾರಿಟೇಬಲ್ ಟ್ರಸ್ಟ್ (ರಿ) - ಮಿನಾಲ್ದೊಟ್ಟು ನಿರಾಶ್ರಿತರ ಆಶ್ರಮಕ್ಕೆ ಭೇಟಿ ನೀಡಿದರು.




ಈ ಸಂದರ್ಭದಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಕೆಲ ಸಮಯ ಆಶ್ರಮವಾಸಿಗಳೊಂದಿಗೆ ಆತ್ಮೀಯವಾಗಿ ಕಳೆಯುತ್ತಾ ಅವರ ಆರೋಗ್ಯ, ಜೀವನೋಪಾಯ ಹಾಗೂ ದೈನಂದಿನ ಅಗತ್ಯಗಳ ಬಗ್ಗೆ ವಿಚಾರಿಸಿದರು. ಬಳಿಕ ಅಲ್ಲಿನ ನಿವಾಸಿಗಳಿಗೆ ದಿನನಿತ್ಯದ ಬಳಕೆಗೆ ಅಗತ್ಯವಿರುವ ವಸ್ತುಗಳು ಹಾಗೂ ಹಣ್ಣುಹಂಪಲುಗಳನ್ನು ವಿತರಿಸಿ ಮಾನವೀಯ ಸೇವೆ ಸಲ್ಲಿಸಲಾಯಿತು.
ಅಲ್ಲದೇ ಆಶ್ರಮವಾಸಿಗಳನ್ನು ಕಾಯರ್ ಪಲ್ಕೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಹಾಗೂ ಕಣ್ಣು ತಪಾಸಣಾ ಮತ್ತು ಮಾಹಿತಿ ಶಿಬಿರಕ್ಕೆ ಕರೆದುಕೊಂಡು ಬಂದು, ತಜ್ಞ ವೈದ್ಯರ ಮೂಲಕ ಅವರ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಲಾಯಿತು. ಶಿಬಿರದಲ್ಲಿ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿ, ಅಗತ್ಯವಿದ್ದವರಿಗೆ ಉಚಿತ ಔಷಧಿಗಳನ್ನು ಹಾಗೂ ಕನ್ನಡಕಗಳನ್ನು ವಿತರಿಸಲಾಯಿತು.
ಈ ಸೇವಾ ಕಾರ್ಯದ ಮೂಲಕ ನಿರಾಶ್ರಿತ ಹಾಗೂ ಹಿಂದುಳಿದ ವರ್ಗದವರಿಗೆ ಆರೋಗ್ಯ ಅರಿವು ಮೂಡಿಸುವ ಜೊತೆಗೆ, ಸಮಾಜದ ಮುಖ್ಯಧಾರೆಗೆ ಅವರನ್ನು ಸೇರಿಸುವ ಮಹತ್ವದ ಕಾರ್ಯವನ್ನು ಸಂಘ-ಸಂಸ್ಥೆಗಳು ಕೈಗೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಮಾಜದ ಪ್ರತಿಯೊಬ್ಬರೂ ಆರೋಗ್ಯಪೂರ್ಣವಾಗಿ, ಗೌರವಯುತ ಜೀವನ ನಡೆಸಬೇಕೆಂಬ ಉದ್ದೇಶದಿಂದ ಈ ಮಾನವೀಯ ಸೇವೆ ಕೈಗೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.