ಬಂಟ್ವಾಳ, ಡಿ. 28 (DaijiworldNews/AA): ತಾಲೂಕಿನ ಮಣಿನಾಲ್ಕೂರು ಗ್ರಾಮದ ಗ್ರಾಮೀಣ ಪ್ರದೇಶವಾದ ಕಾಯರ್ ಪಲ್ಕೆ ಎಂಬಲ್ಲಿ, ಹೆಗ್ಡೇಸ್ ಖಾಸಗಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಬೃಹತ್ ಉಚಿತ ಆರೋಗ್ಯ ಹಾಗೂ ಕಣ್ಣು ತಪಾಸಣಾ ಶಿಬಿರವು ಭಾನುವಾರ ಡಿಸೆಂಬರ್ 28ರಂದು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.













ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ), ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ), ಹೆಗ್ಡೇಸ್ ಖಾಸಗಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಕೆಎಂಸಿ ಆಸ್ಪತ್ರೆ ಅತ್ತಾವರ – ಮಂಗಳೂರು ಹಾಗೂ ಊರಿನ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಈ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಸಾಮಾನ್ಯ ರೋಗ ತಪಾಸಣೆ, ಮಕ್ಕಳ ವಿಭಾಗ, ಎಲುಬು ಮತ್ತು ಕೀಲು ರೋಗ ತಪಾಸಣೆ, ಕಿವಿ–ಮೂಗು–ಗಂಟಲು ತಪಾಸಣೆ, ಕ್ಯಾನ್ಸರ್ ರೋಗ ತಪಾಸಣೆ, ಕಣ್ಣು ತಪಾಸಣೆ, ಹೃದಯ ರೋಗ ತಪಾಸಣೆ, ಸ್ತ್ರೀರೋಗ ತಪಾಸಣೆ, ರಕ್ತದ ಒತ್ತಡ (ಬಿಪಿ) ಮತ್ತು ಮಧುಮೇಹ ತಪಾಸಣೆ, ಉಚಿತ ಇಸಿಜಿ ತಪಾಸಣೆ, ಉಚಿತ ಔಷಧ ವಿತರಣೆ ಹಾಗೂ ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ ಸೇರಿದಂತೆ ಸಮಗ್ರ ವೈದ್ಯಕೀಯ ಸೇವೆಗಳನ್ನು ಒದಗಿಸಲಾಯಿತು.
ಕೆಎಂಸಿ ಆಸ್ಪತ್ರೆಯ ನುರಿತ ಹಾಗೂ ಅನುಭವೀ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಶಿಬಿರವನ್ನು ನಡೆಸಲಾಗಿದ್ದು, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ತಪಾಸಣಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಅಗತ್ಯವಿದ್ದ ರೋಗಿಗಳಿಗೆ ಕೆಎಂಸಿ ಆಸ್ಪತ್ರೆಯ ಹಸಿರು ಕಾರ್ಡ್ ಸೌಲಭ್ಯದ ಮೂಲಕ ಶಸ್ತ್ರಚಿಕಿತ್ಸೆ ಹಾಗೂ ಒಳರೋಗ ಚಿಕಿತ್ಸೆಗಳಿಗೆ ವಿಶೇಷ ರಿಯಾಯಿತಿಯೊಂದಿಗೆ ಮುಂದಿನ ಚಿಕಿತ್ಸೆಗಾಗಿ ಮಾರ್ಗದರ್ಶನ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಸಂಚಾಲಕರಾದ ಡಿ. ರಮೇಶ ನಾಯಕ್ ಅವರು, "ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಜನರಿಗೆ ರೋಗ ಲಕ್ಷಣಗಳ ಬಗ್ಗೆ ಅರಿವು ಮೂಡಿಸಿ, ಮುಂಜಾಗ್ರತಾ ಕ್ರಮಗಳನ್ನು ತಿಳಿಸುವ ಈ ಕಾರ್ಯಕ್ರಮಗಳು ಸಮಾಜಕ್ಕೆ ಬಹಳ ಅಗತ್ಯ. ಇತ್ತೀಚಿನ ದಿನಗಳಲ್ಲಿ ಹೃದಯಘಾತ, ಹೃದಯ ಸ್ತಂಭದಂತಹ ಗಂಭೀರ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆ ನಿರಂತರ ಆರೋಗ್ಯ ತಪಾಸಣೆ ಮತ್ತು ತಜ್ಞ ವೈದ್ಯರ ಸಲಹೆ ಅವಶ್ಯಕ. ಕೆಎಂಸಿ ಆಸ್ಪತ್ರೆಯಂತಹ ಪ್ರತಿಷ್ಠಿತ ಸಂಸ್ಥೆಗಳು ಈ ಮಹತ್ಕಾರ್ಯಕ್ಕೆ ಕೈಜೋಡಿಸಿರುವುದು ಅಭಿನಂದನೀಯ" ಎಂದರು. ಡಾ. ವಿಜಯಲಕ್ಷ್ಮಿ ನಾಯಕ್ ಅವರು ಪ್ರಸ್ತಾಪಿಸುತ್ತಾ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು, "ಊರು ಆರೋಗ್ಯಪೂರ್ಣವಾಗಿರ ಬೇಕಾದರೆ ಸಾಮಾಜಿಕ ಕಾಳಜಿ ಅತ್ಯಂತ ಮುಖ್ಯ. ಶಾಲಾ ಆವರಣದಲ್ಲಿ ಇಂತಹ ಜವಾಬ್ದಾರಿಯುತ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದು ಗ್ರಾಮಸ್ಥರಿಗೆ ಬಹಳ ಉಪಯುಕ್ತವಾಗಿದೆ," ಎಂದು ಶಿಬಿರದ ಆಯೋಜಕರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸುಜಾತಾ ಸಾಮಂತ್ ಅವರು ಪ್ರಾರ್ಥನೆ ನೆರವೇರಿಸಿದರು. ಧಮ೯ಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಭಾಸ್ಕರ್ ಅವರು ಕಾರ್ಯಕ್ರಮ ನಿರೂಪಿಸಿದರು. ಸುದೀರ್ ನಾಯಕ್ ಬೆಂಗಳೂರು ಮತ್ತು ಕೆ.ಎಂ.ಸಿಯ ಡಾ. ವೈಭವ್ ಅವರು ಸಾಂದರ್ಭಿಕ ನುಡಿಗಳೊಂದಿಗೆ ಶಿಬಿರದ ಮಹತ್ವವನ್ನು ವಿವರಿಸಿದರು. ಸುಚಿತ್ರ ನಾಯಕ್ ಮಣಿನಾಲ್ಕೂರು ಅವರು ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಪ್ರಮುಖರಾದ ಪ್ರಕಾಶ್ ಹೆಗ್ಗಡೆ, ಕೂಡಿಬೈಲು ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀನಿವಾಸ್ ಶೆಣೈ, ಮಣಿನಾಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ವಿಮಲ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಪ್ರಭು ವಗ್ಗ, ಕಾರ್ಯದರ್ಶಿಗಳಾದ ರವೀಂದ್ರ ನಾಯಕ್ ಕುಂಟಲ್ಪಾಡಿ, ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ದಯಾನಂದ ನಾಯಕ್, ಕಾರ್ಯದರ್ಶಿಗಳಾದ ಸುಧಾಕರ್ ಪ್ರಭು ಪೆರ್ಮರೋಡಿ, ವಸಂತ ನಾಯಕ್ ಕೂಡಿಬೈಲು, ಸುಭಾಷ್ ನಾಯಕ್ ಸರಪಾಡಿ, ವ್ಯವಸಾಯ ಸೇವಾ ಸಹಕಾರಿ ಪಾಣೆಮಂಗಳೂರು ನಿರ್ದೇಶಕರಾದ ಜ್ಞಾನೇಶ್ ಪ್ರಭು, ಗಣೇಶ್ ಪ್ರಭು ಪಂಜಿಕಲ್ಲು, ಗಣೇಶ್ ಪ್ರಭು ಓಮ, ಹಂಡೀರು ಶ್ರೀಧರ್ ಪ್ರಭು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸ್ಥಳೀಯರಾದ ಭಾಸ್ಕರ್ ಪ್ರಭು ಮತ್ತು ವಾಸುದೇವ ಪ್ರಭು ಕೊರ್ದೊಟ್ಟು ಅವರ ನೇತೃತ್ವದಲ್ಲಿ, ಮುರಳೀಧರ ಪ್ರಭು ವಗ್ಗ ಹಾಗೂ ಕೆಎಂಸಿಯ ಕಾರ್ತಿಕ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಈ ಉಚಿತ ಆರೋಗ್ಯ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವಿಶೇಷವಾಗಿ ನಮ್ಮನೆ ಚಾರಿಟೇಬಲ್ ಟ್ರಸ್ಟ್ ಮಿನಾಲ್ದೋಟ್ಟು ಆಶ್ರಮದ ಆಶ್ರಮ ವಾಸಿಗಳು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಹಾಗೂ ಮಾಹಿತಿ ಪಡಕೊಂಡರು. ಮುಖ್ಯಸ್ಥರಾದ ರತ್ನಾಕರ್ ರವರು ಉಪಸ್ಥಿತರಿದ್ದರು. ದಿನನಿತ್ಯದ ಬಳಕೆಗೆ ಬೇಕಾಗಿರುವ ವಸ್ತುಗಳನ್ನು ಹಾಗೂ ಹಣ್ಣುಹಂಪಲುಗಳನ್ನು ಹಂಚಲಾಯಿತು.