ಕಾರ್ಕಳ, ಡಿ. 28 (DaijiworldNews/AA): ಮೂಡುಬಿದಿರೆ - ಕಾರ್ಕಳ ಗಡಿಭಾಗದ ಬೆಳುವಾಯಿ ಚಿಲಿಂಬಿ ಪರಿಸರದ ಮೂಲಕವಾಗಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-೧೬೯ರ ಕೂದಲೆಳೆಯ ದೂರದಲ್ಲಿ ಭಾರೀ ಪ್ರಮಾಣದ ಸ್ಟೋಟಕ ಬಳಸಿ ಕರಿಬಂಡೆ ಕಲ್ಲುಗಳನ್ನು ಛಿದ್ರಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.



ರಾಷ್ಟ್ರೀಯ ಹೆದ್ದಾರಿ-169 ರ ಬದಲಿ ಮಾರ್ಗದ ಕಾರ್ಯವು ಕಳೆದ ಕೆಲ ತಿಂಗಳುಗಳ ಹಿಂದೆ ಈ ಪ್ರದೇಶದಲ್ಲಿ ಆರಂಭಿಸಲಾಗಿತ್ತು.
ಕಾಮಗಾರಿ ನಡೆಯುತ್ತಿರುವ ಭೂತಳದಲ್ಲಿ ಭಾರೀ ಪ್ರಮಾಣದಲ್ಲಿ ಕರಿಬಂಡೆ ಹುದುಗಿದ್ದು, ಅದರ ತೆರವು ಕಾರ್ಯಕ್ಕಾಗಿ ಸ್ಟೋಟಕ ಕಾರ್ಯ ನಡೆಸಲಾಗುತ್ತಿದೆ. ಅದರ ಮುಂದುವರಿದ ಭಾಗವು ಸುಮಾರು 25 ಮೀಟರ್ ದೂರದ ಕಾರ್ಕಳ ತಾಲೂಕಿನ ಬಾರಾಡಿ ಕ್ರಾಸ್ ಗೂ ದಾಟಿಬರಲಿದೆ.
ಕಾಮಗಾರಿಯೂ ಆಗೊಮ್ಮೆ ಈಗೊಮ್ಮೆ ಕಣ್ಣುಮುಚ್ಚಾಲೆ ಆಟದಂತೆ ನಡೆಯುತ್ತಿದರೂ, ಸಾರ್ವಜನಿಕ ಸುರಕ್ಷಿತ ಕ್ರಮ ಕೈಗೊಳ್ಳದೇ ಇರುವುದು ಲೋಕಸತ್ಯ. ಕಾಮಗಾರಿ ಆರಂಭಗೊಂಡಿದ್ದರೂ, ಕಂಟ್ರಾಕ್ಟರ್ ಮಾತ್ರ ನಿರಾಪೇಕ್ಷಣಾ ಪತ್ರಕ್ಕಾಗಿ ವಿವಿಧ ಇಲಾಖೆಗಳ ಕಚೇರಿಗಳ ಕದ ತಟ್ಟುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಕಾಮಗಾರಿ ನಡೆಯುತ್ತಿರುವ ಸ್ಥಳದ ಕೂದಲೆಳೆ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಅದರ ಮೂಲಕವಾಗಿ ಅಸಂಖ್ಯಾತ ವಾಹನಗಳು ಓಡಾಟ ನಡೆಸುತ್ತಿವೆ.
ರಾಷ್ಟ್ರೀಯ ಹೆದ್ದಾರಿ-169 ಇದರ ನೂತನ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಂಟ್ರಾಕ್ಟರ್ ದಾರರು ಮನ್ನೆಚ್ಚರಿಕೆ ವಹಿಸದೇ ಅಪಾಯಕಾರಿ ಸ್ಟೋಟಕ ಬಳಸಿ ಬೇಕಾಬಿಟ್ಟಿಯಾಗಿ ಕರಿಬಂಡೆ ಛಿದ್ರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ಜಂಟಿಯಾಗಿ ಸೂಕ್ತ ಕ್ರಮ ಕೈಗೊಳ್ಳಲೇ ಬೇಕು ಎಂಬ ಆಗ್ರಹವೂ ಪ್ರಜ್ಞಾವಂತ ನಾಗರಿಕರದಾಗಿದೆ.