ದಕ್ಷಿಣ ಕನ್ನಡ, ಡಿ. 28 (DaijiworldNews/TA): ಕರಾವಳಿಯ ಅಡಿಕೆ ಬೆಳೆಗಾರರಿಗೆ ಎದುರಾಗುವ ಸಮಸ್ಯೆಗಳಿಗೆ ಕೊನೆ ಇಲ್ಲವಾಗಿದೆ. ಪ್ರಸ್ತುತ ತೋಟಗಳಲ್ಲಿ ಎಲೆಚುಕ್ಕೆ ರೋಗ ಕಾಣಿಸಿದ್ದು, ಅವುಗಳ ನಿಯಂತ್ರಣವೇ ಸವಾಲಾಗಿದೆ. ಎಲೆ ಚುಕ್ಕೆ ರೋಗ ಫಸಲಿನ ಮೇಲೆ ಪರಿಣಾಮ ಬೀರುತ್ತಿದ್ದು, ಇಳುವರಿ ಕುಸಿತದ ಭೀತಿ ಎದುರಾಗಿದೆ.

ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಎಲೆಚುಕ್ಕೆ ರೋಗ ಬೇಸಗೆಯಲ್ಲಿ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಮಳೆ ಅಧಿಕವಾಗಿರುವ ಕಾರಣ ಎಲೆಚುಕ್ಕೆ ರೋಗ ತೋಟಗಳಲ್ಲಿ ವ್ಯಾಪಕವಾಗಿ ಹರಡಿದೆ. ರೋಗ ಬಾಧೆಗೆ ಒಳಗಾದ ಅಡಿಕೆ ಮರಗಳ ಸೋಗೆಗಳು ಒಣಗಿವೆ. ಅವುಗಳಿಗೆ ಸಿಂಪಡಣೆ ನೀಡಲು ಸಾಧ್ಯವಾಗದೆ ರೈತರು ಪರದಾಡುವಂತಾಗಿದೆ.
ದ.ಕ. ಜಿಲ್ಲೆಯ ಬಂಟ್ವಾಳ, ಪುತ್ತೂರು ಭಾಗದ ತೋಟಗಳಲ್ಲಿ ರೋಗ ಬಾಧೆ ಇದೆ. ರೋಗ ಸಂಪೂರ್ಣ ಹತೋಟಿಗೆ ತರುವ ನಿಟ್ಟಿನಲ್ಲಿ ರೈತರು ಪ್ರಯತ್ನಿಸುತ್ತಿದ್ದಾರೆ. ಸಂಪೂರ್ಣವಾಗಿ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಾಧ್ಯವಾಗುತ್ತಿಲ್ಲ ಎಂಬುವುದು ರೈತರ ಮಾತು.