ಸುಳ್ಯ, ಡಿ. 28 (DaijiworldNews/TA): ನಗರದಿಂದ ಕೆಲವೇ ಕಿ.ಮಿ. ದೂರದಲ್ಲಿರುವ ಅಜ್ಜಾವರ ಕಾಡಾನೆಗಳ ದಾಳಿಯಿಂದ ತತ್ತರಿಸಿದೆ. ವಾರದಿಂದ ಜನವಸತಿ ಸಮೀಪ ಬೀಡು ಬಿಟ್ಟಿರುವ ಆನೆಗಳ ಹಿಂಡು ಸಂಜೆ ಹೊತ್ತಿಗೆ ಗ್ರಾಮಸ್ಥರಿಗೆ ದಿಗ್ವಂಧನ ವಿಧಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇದಿನಡ್ಕ, ಕರ್ಲಪ್ಪಾಡಿ ಭಾಗದ ಜನತೆ ಗಜ ಭೀತಿಯಿಂದ ಮನೆಯಿಂದ ಹೊರ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕ ಮರಿ ಸೇರಿದಂತೆ 3 ಆನೆಗಳ ಹಿಂಡು ಈ ಭಾಗದಲ್ಲಿ ಕೆಲವು ದಿನಗಳಿಂದ ತಿರುಗಾಟ ನಡೆಸುತ್ತಿದ್ದು ರಸ್ತೆಯಲ್ಲಿ, ನಡು ದಾರಿಯಲ್ಲಿ ಕೃಷಿ ಭೂಮಿಯಲ್ಲಿ, ಮನೆಯಂಗಳದಲ್ಲಿ ಹೀಗೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದೆ. ರಾತ್ರಿ ಹಗಲೆನ್ನದೆ ಎಲ್ಲೆಡೆ ಆನೆಗಳು ನಿರ್ಭೀತಿಯಿಂದ ಸಂಚರಿಸುತ್ತಿದೆ. ಅಜ್ಜಾವರ- ನಾರ್ಕೊಡು ರಸ್ತೆಯನ್ನು ತಮ್ಮ ರಹದಾರಿಯನ್ನಾಗಿಸಿರುವ ಆನೆಗಳು ರಸ್ತೆ ಮಧ್ಯದಲ್ಲಿಯೇ ಸಂಚರಿಸಿ, ಭೀತಿ ಹುಟ್ಟಿಸುತಿದೆ. ಜನರು 6 ಗಂಟೆಗೆ ಮುನ್ನ ಮನೆ ಸೇರಬೇಕಾದ ಅವಸ್ಥೆ ಬಳಿಕ ಮನೆಯಿಂದ ಹೊರಬರಲು ಭಯಪಡುವ ಸ್ಥಿತಿ. ಜನ ನಿಬಿಡ ಪ್ರದೇಶದ ಈ ಭಾಗದ ಜನತೆ ಅಕ್ಷರಷಃ ದಿಗ್ವಂಧನಕ್ಕೊಳಗಾಗುವ ಪರಿಸ್ಥಿತಿ. ಕೃಷಿಕರು ತೋಟಕ್ಕೆ, ಕಾರ್ಮಿಕರು ರಬ್ಬರ್ ಟ್ಯಾಪಿಂಗ್ ಗೆ ಹೋಗಲು ಸಾಧ್ಯವಾಗುತ್ತಿಲ್ಲ. ಶಾಲೆಗೆ ತೆರಳುವ ವಿಧ್ಯಾರ್ಥಿಗಳು, ನಾಗರಿಕರು ರಸ್ತೆಯಲ್ಲಿ ಹಗಲು ಸಂಚಾರಕ್ಕೂ ಭಯ ಪಡುವ ಸನ್ನಿವೇಶ ಎದುರಾಗಿದೆ.
ನಿರಂತರವಾಗಿ ವಾರಕ್ಕೂ ಹೆಚ್ಚು ದಿನಗಳಿಂದ ಪ್ರದೇಶಗಳ ಬಯಲಿಗೆ ಆನೆಗಳು ಇಳಿದಿದ್ದು ಅಜ್ಜಾವರ ಗ್ರಾಮ ಪಂಚಾಯತ್ ಸಮೀಪದ ತೋಟಕ್ಕೂ ಧಾಳಿ ಇಟ್ಟಿದೆ. ಅಲ್ಲದೇ ರಾತ್ರಿ ಸಂಚಾರದ ಜೊತೆಗೆ ಕೆಲಸ ಮುಗಿಸಿ ಮನೆಗೆ ಬರುವವರ ಪಾಡು ಹೇಳತೀರದಾಗಿದೆ. ಇತ್ತ ಮೇದಿನಡ್ಕ ಭಾಗದಲ್ಲಿ ನಿರಂತರವಾಗಿ ತೋಟಗಳಲ್ಲಿ ಬಾಳೆ, ಅಡಿಕೆ, ತೆಂಗು ಸೇರಿದಂತೆ ಇತರೆ ಕೃಷಿಗಳಿಗೆ ಹಾನಿ ಮಾಡಲಾಗುತ್ತಿದ್ದು, ಪಡ್ಡಂಬೈಲು, ಕರ್ಲಪ್ಪಾಡಿ ಭಾಗದಲ್ಲಿ ವ್ಯಾಪಕವಾಗಿ ಕೃಷಿ ಹಾನಿ ಮಾಡಿದೆ. ತೋಟಗಳಿಗೆ ನೀರು ಹಾಯಿಸಲು ತೋಟಕ್ಕೆ ಇಳಿಯಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳಿಂದ ಪಡ್ಡಂಬೈಲು, ಮೇದಿನಡ್ಕ, ಶಾಂತಿಮಜಲು, ಅಜ್ಜಾವರ ಭಾಗದಲ್ಲಿ ಆನೆಗಳು ಮ್ಯಾರಥಾನ್ ನಡೆಸುತ್ತಿದೆ. ಕಾಡಾನೆಗಳನ್ನು ಕೂಡಲೇ ಕಾಡಿಗೆ ಅಟ್ಟಲು ಜಿಲ್ಲೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ಕೂಡಲೇ ಕಾರ್ಯಾಚರಣೆ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.