ಮಂಗಳೂರು, ಡಿ. 27 (DaijiworldNews/AK): ಬೈಕ್ನಲ್ಲಿ ಅಕ್ರಮವಾಗಿ ದಾಖಲೆಗಳಿಲ್ಲದೆ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಇಬ್ಬರು ತಡೆದು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬಜ್ಪೆ ಪೊಲೀಸ್ ರಾಣೆಯ ಮಳಲಿ ನಾರ್ಲಪದವು ರಸ್ತೆಯಲ್ಲಿ ನಡೆದಿದೆ.


ಮಳಲಿ-ನಾರ್ಲಪದವು ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ 11 ವರ್ಷದ ಬಾಲಕಿಯೊಬ್ಬಳು ಗಾಯಗೊಂಡ ಘಟನೆಯ ನಂತರ, ಬಜ್ಪೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ . ನೈತಿಕ ಪೊಲೀಸ್ ಗಿರಿ ಆರೋಪದ ಮೇಲೆ ಇಬ್ಬರು ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮುಲ್ಲರಪಟ್ನದ ಅಬ್ದುಲ್ ಸತ್ತಾರ್ ತನ್ನ ಅಪ್ರಾಪ್ತ ಮಗಳೊಂದಿಗೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ೧೯ ಕೆ.ಜಿ ಗೋಮಾಂಸವನ್ನು ಬೈಕ್ನಲ್ಲಿ ಆನುಮತಿಯಿಲ್ಲದೆ ಸಾಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಯಡಪದವು ಮೂಲದ ಸುಮಿತ್ ಭಂಡಾರಿ (21) ಮತ್ತು ರಜತ್ ನಾಯಕ್ (30) ಇಬ್ಬರು ಟಾಟಾ ಸುಮೋದಲ್ಲಿ ಬಂದು ಅವರ ಬೈಕ್ನ್ನು ಅಡ್ಡಗಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಯ ವೇಳೆ, ಬೈಕ್ ಪಲ್ಟಿಯಾಗಿ, ಸೈಲೆನ್ಸರ್ ಸ್ಪರ್ಶಿಸಿ ಮಗುವಿನ ಕಾಲಿಗೆ ಸುಟ್ಟ ಗಾಯವಾಗಿದೆ ಎಂದು ವರದಿಯಾಗಿದೆ. ಸತ್ತಾರ್ ವಾಹನವನ್ನು ತ್ಯಜಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಸ್ಥಳೀಯ ನಿವಾಸಿಗಳು ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸತ್ತಾರ್ ಆಪ್ರದೇಶದಲ್ಲಿ ನಿಯಮಿತವಾಗಿ ಗೋಮಾಂಸವನ್ನು ತಲುಪಿಸುತ್ತಿದ್ದ ಎನ್ನಲಾಗಿದ್ದು, ೩೫ ಪ್ಯಾಕೆಟ್ಗಳಲ್ಲಿ ೧೯ ಕೆ.ಜಿಗಳಷ್ಟು ಗೋಮಾಂಸ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಬ್ಬರ ಮೇಲೆ ಹಲ್ಲೆ ನಡೆದಿದೆಯೇ ಎಂಬುವುದು ಇನ್ನಷ್ಟೇ ದೃಡೀಕರಿಸಬೇಕಿದೆ.
ಇಲ್ಲಿಯವರೆಗೆ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ, ಪೊಲೀಸರು ಭಂಡಾರಿ ಮತ್ತು ನಾಯಕ್ ವಿರುದ್ಧ ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಸರಿಯಾದ ದಾಖಲೆಗಳಿಲ್ಲದೆ ಗೋಮಾಂಸ ಸಾಗಿಸಿದ್ದಕ್ಕಾಗಿ ಸತ್ತರ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.