ಧರ್ಮಸ್ಥಳ, ಡಿ. 27 (DaijiworldNews/TA): ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಕ್ರಮಕ್ಕಾಗಿ ಎಸ್ಐಟಿಯು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ವರದಿಯ ಮೇಲಿನ ವಿಚಾರಣೆ ಪೂರ್ಣ ಗೊಂಡಿದ್ದು ಡಿ. 26ಕ್ಕೆ ಕಾಯ್ದಿರಿಸಿದ್ದ ಆದೇಶದ ದಿನವನ್ನು ನ್ಯಾಯಾಲಯ ಡಿ. 29ಕ್ಕೆ ಮುಂದೂಡಿದೆ.

ಎಸ್ಐಟಿಯು ನ. 20ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಚಿನ್ನಯ್ಯ ಸಹಿತ 6 ಮಂದಿಯನ್ನು ಆರೋಪಿಗಳನ್ನಾಗಿ ಉಲ್ಲೇಖೀಸಿ ವರದಿ ನೀಡಿದ್ದು, ತನಿಖೆ ವಿವರವನ್ನು ದಾಖಲಿಸಿ ಮುಂದಿನ ತನಿಖೆಗೆ ಮಾರ್ಗದರ್ಶನ ನೀಡುವಂತೆ ಎಸ್ಐಟಿ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಅವರು ವಾದ ಮಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು. ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಸೆಕ್ಷನ್ ನಡಿ ಸುಳ್ಳು ಸಾಕ್ಷಿಯ ಅಪರಾಧಕ್ಕಾಗಿ ಕಾನೂನು ಕ್ರಮಕ್ಕೆ ವಿನಂತಿಸಿ ಆರೋಪಿಗಳ ವಿರುದ್ಧ 3,923 ಪುಟಗಳ ವರದಿಯನ್ನು ಸಲ್ಲಿಸಿದ್ದರು.
ಎಸ್ಐಟಿ ಪರ ವಕೀಲರು ಕೆಲವೊಂದು ಮಹತ್ವದ ಅಂಶಗಳನ್ನು ನ್ಯಾಯಾಲಯದ ಮುಂದಿಟ್ಟು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿಸಿದ್ದರು. ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ವಾದವನ್ನು ಆಲಿಸಿ ಮುಂದಿನ ಆದೇಶವನ್ನು ಡಿ. 26ಕ್ಕೆ ಕಾಯ್ದಿರಿಸಿದ್ದರು. ಆದರೆ ಇದೀಗ ಆದೇಶದ ದಿನವನ್ನು ಡಿ. 29ಕ್ಕೆ ಮುಂದೂಡಿದೆ. ಬುರುಡೆ ಪ್ರಕರಣದ ಆರೋಪಿಯಾಗಿರುವ ಚಿನ್ನಯ್ಯ ಕೂಡ ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ್ದು, ಬಳಿಕ ನ್ಯಾಯಾಲಯದ ಜಾಮೀನಿನ ಷರತ್ತಿನ ಭಾಗವಾಗಿ ಎಸ್ಐಟಿ ಕಚೇರಿಗೂ ಹಾಜರಾಗಿ ಸಹಿ ಹಾಕಿ ತೆರಳಿದ್ದಾನೆ. ಆತ ಪತ್ನಿ ಮಲ್ಲಿಕಾ ಜತೆ ಆಗಮಿಸಿದ್ದನು ಎನ್ನಲಾಗಿದೆ.