ಮಂಗಳೂರು, ಡಿ. 27 (DaijiworldNews/TA): ಸಂಸದ ಕ್ಯಾ. ಬ್ರಿಜೇಶ್ ಶೆಟ್ಟಿಯವರ ಸಾರಥ್ಯದಲ್ಲಿ ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯುವ 9ನೇ ವರ್ಷದ ಮಂಗಳೂರು ಕಂಬಳ ಈ ಬಾರಿ ವಿಶೇಷ ಆಕರ್ಷಣೆಯೊಂದಿಗೆ ನಡೆಯಲಿದೆ. ಡಿಸೆಂಬರ್ 27ರಂದು ಆಯೋಜಿಸಲಾಗಿರುವ ಈ ವರ್ಷದ ಕಂಬಳದಲ್ಲಿ ಒಟ್ಟು 9 ವಿಭಿನ್ನ ಚಟುವಟಿಕೆಗಳನ್ನು ರೂಪಿಸಲಾಗಿದೆ.



ತುಳು ಸಂಸ್ಕೃತಿ ಹಾಗೂ ಕಂಬಳದ ಮಹತ್ವವನ್ನು ನಗರ ಪ್ರದೇಶದಲ್ಲಿ ಬೆಳೆದ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ 9 ವರ್ಷಗಳ ಹಿಂದೆ ಸಣ್ಣ ಪ್ರಯತ್ನವಾಗಿ ಆರಂಭಗೊಂಡ ಮಂಗಳೂರು ಕಂಬಳ ಇಂದು ದೊಡ್ಡ ಹಬ್ಬದ ರೂಪ ಪಡೆದುಕೊಂಡಿದೆ. ಈ ಬಾರಿಯ ಕಂಬಳವನ್ನು ಬೆಳಗ್ಗೆ 8.30ಕ್ಕೆ ಕಂಕನಾಡಿ ಬ್ರಹ್ಮಬೈದ್ಯರ್ಕಳ ಗರೋಡಿಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಉದ್ಘಾಟಿಸಿದ್ದಾರೆ.
9ನೇ ವರ್ಷದ ಕಂಬಳ – 9 ವಿಶಿಷ್ಟ ಕಾರ್ಯಕ್ರಮಗಳು : ಈ ಬಾರಿ ರಾಣಿ ಅಬ್ಬಕ್ಕ ಅವರ 500ನೇ ವರ್ಷದ ಸ್ಮರಣಾರ್ಥವಾಗಿ ಚಾರಿತ್ರಿಕ ಚಿತ್ರ ಪ್ರದರ್ಶನ ನಡೆಯಲಿದೆ. ಜೊತೆಗೆ ವಂದೇ ಮಾತರಂ ಗೀತೆಯ 150ನೇ ವರ್ಷದ ನೆನಪಿನಲ್ಲಿ, 150 ವಿದ್ಯಾರ್ಥಿನಿಯರಿಂದ ಸಾಮೂಹಿಕ ವಂದೇ ಮಾತರಂ ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟನಾ ಸಂದರ್ಭದಲ್ಲಿ ಆಯೋಜಿಸಲಾಗಿದೆ.
ಉದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ‘ಬ್ಯಾಕ್ ಟು ಊರು’ ಪರಿಕಲ್ಪನೆಗೆ ಶಕ್ತಿ ತುಂಬಿರುವ 9 ಮಂದಿಗೆ ಮಂಗಳೂರು ಕಂಬಳ ಪ್ರಶಸ್ತಿ 2025 ನೀಡಿ ಗೌರವಿಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಗಿಡ ನೆಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುತ್ತದೆ.
ವೃದ್ಧರು ಹಾಗೂ ವಿಶೇಷ ಸಾಮರ್ಥ್ಯವಂತರಿಗೆ ವಿಶೇಷ ಅವಕಾಶ : ಈ ಸಲ ವೃದ್ಧರು ಹಾಗೂ ವಿಶೇಷ ಚೈತನ್ಯ ಹೊಂದಿರುವವರು ಮತ್ತು ಓಲ್ಡ್ ಏಜ್ಡ್ ಹೋಮ್ನಲ್ಲಿ ನೆಲೆಸಿರುವ ಮಂಗಳೂರು ನಗರ ಪರಿಸರದ ನಿವಾಸಿಗಳನ್ನು ಕರೆತಂದು ಕಂಬಳ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಸ್ಪರ್ಧೆಗಳು ಮತ್ತು ಹೊಸ ಪ್ರಯೋಗಗಳು : ‘ರಂಗ್ದ ಕೂಟ’ ಹೆಸರಿನಲ್ಲಿ ಚಿತ್ರಕಲಾ ಸ್ಪರ್ಧೆ ರಂಗ್ದ ಕಿನ್ಯ, ರಂಗ್ದ ಎಲ್ಯ, ರಂಗ್ದ ಮಲ್ಲ ಮತ್ತು ರಂಗ್ದ ಕೂಟ ವಿಭಾಗಗಳಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ.
ಮಂಗಳೂರು ಕಂಬಳದ ಕ್ಷಣಗಳನ್ನು ರೀಲ್ಸ್ ರೂಪದಲ್ಲಿ ಸೆರೆಹಿಡಿದು ಅತಿ ಹೆಚ್ಚು ವೀಕ್ಷಣೆ ಪಡೆಯುವವರಿಗೆ ಬಹುಮಾನ ನೀಡಲಾಗುವುದು. ಫೋಟೋಗ್ರಫಿ ಸ್ಪರ್ಧೆ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬಳಸಿ ಕಂಬಳ ಕಲಾಕೃತಿ ರಚಿಸುವ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ.
ಸ್ವಚ್ಛ ಕಂಬಳದ ಸಂದೇಶ : ಮಂಗಳೂರು ನಗರವನ್ನು ‘ಸ್ವಚ್ಛ ಕಂಬಳ’ ಮಾದರಿಯನ್ನಾಗಿ ರೂಪಿಸುವ ಉದ್ದೇಶವೂ ಈ ಕಾರ್ಯಕ್ರಮದಲ್ಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರು, ಶಾಸಕರು ಸೇರಿದಂತೆ ನೂರಾರು ಗಣ್ಯರು ಕಂಬಳದಲ್ಲಿ ಭಾಗವಹಿಸಲಿದ್ದಾರೆ. ಮಂಗಳೂರು ಕಂಬಳದ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಡಿಸೆಂಬರ್ 27ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.