ಉಡುಪಿ, ಡಿ. 27 (DaijiworldNews/TA): ಜಿಲ್ಲೆಯ ಕಾಪುವಿನ ಹೆಜಮಾಡಿಯಲ್ಲಿ ನಡೆದಿದ್ದ ಸರ ಕಳ್ಳತನದ ಆರೋಪಿಗಳು ಇದೀಗ ಪತ್ತೆಯಾಗಿದ್ದಾರೆ. ನೇಮೋತ್ಸವ ನಡೆಯುತ್ತಿದ ಸಂದರ್ಭ ಒಬ್ಬ ವೃದ್ಧೆಯನ್ನು 3 ಮಹಿಳೆಯರು ಸುತ್ತಲಿನಿಂದ ಆವರಿಸಿ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನ ಎಗರಿಸಿದ್ದರು. ಇದೀಗ ಈ ಮಹಿಳೆಯರನ್ನು ಸಾರ್ವಜನಿಕರು ಪತ್ತೆ ಹಚ್ಚಿದ್ದಾರೆ.

ಹೆಜಮಾಡಿ ನಿವಾಸಿ ಕಮಲ ಎಂಬುವವರು ಪೂಜೆಯಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭ, ಮೂವರು ಕಳ್ಳಿಯರು ಅವರನ್ನು ಮೂರು ಕಡೆಯಿಂದ ಸುತ್ತುವರಿದು, ಗಂಟೆ ಹೊಡೆಯುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಚತುರತೆಯಿಂದ ಕದ್ದು ಪರಾರಿಯಾಗಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕಳ್ಳತನವಾದ ಚಿನ್ನದ ಸರದ ಮೌಲ್ಯ ಸುಮಾರು 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಘಟನೆ ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಆರೋಪಿಗಳ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ತನಿಖೆ ಮುಂದುವರೆದಿದೆ.