ಬಂಟ್ವಾಳ,ಡಿ. 26 (DaijiworldNews/ AK): ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧರೊಬ್ಬರ ಮೃತದೇಹ ಡಿಸೆಂಬರ್ 25 ರಂದು ವಿಟ್ಲದ ಬಾವಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಕೊಲ್ನಾಡು ಗ್ರಾಮದ ಕಲ್ಲಮಜಲು ನಿವಾಸಿ ಕಲ್ಲಮಜಲು ಪೂವಪ್ಪ ಪೂಜಾರಿ (65) ಎಂದು ಗುರುತಿಸಲಾಗಿದ್ದು, ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೂಲಗಳ ಪ್ರಕಾರ, ಪೂವಪ್ಪ ಡಿಸೆಂಬರ್ 15 ರಂದು ಮನೆಯಿಂದ ಹೊರಗೆ ಹೋಗಿ, ಶೀಘ್ರದಲ್ಲೇ ಹಿಂತಿರುಗುವುದಾಗಿ ಮನೆಯವರಿಗೆ ಹೇಳಿ ಹೋಗಿದ್ದ, ಆದರೆ ಹಿಂತಿರುಗಿ ಬರಲಿಲ್ಲ. ಅವರು ಕಾಣೆಯಾದ ನಂತರ ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.
ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ಅವರನ್ನು ಪತ್ತೆಹಚ್ಚಲು ಪ್ರಯತ್ನಿಸಿದರೂ, ಅವರು ಎಲ್ಲಿದ್ದಾರೆ ಎಂಬುದು ಪತ್ತೆಯಾಗಿಲ್ಲ. ಗುರುವಾರ, ಕೊಲ್ನಾಡು ಗ್ರಾಮದ ಕಲ್ಲಮಜಲು ಎಂಬಲ್ಲಿ ನಿರ್ಜನ ಮನೆಗೆ ಸೇರಿದ 60 ಅಡಿ ಆಳದ ಬಾವಿಯಲ್ಲಿ ಅವರ ಶವ ಪತ್ತೆಯಾಗಿದೆ.
ಫ್ರೆಂಡ್ಸ್ ವಿಟ್ಲ ತಂಡದ ಮುರಳಿ ವಿಟ್ಲ ಅವರು ಬಾವಿಗೆ ಇಳಿದು ಶವವನ್ನು ಹೊರತೆಗೆಯಲು ಸಹಾಯ ಮಾಡಿದರು. ವಿಟ್ಲ ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.