ಉಡುಪಿ, ಡಿ. 26 (DaijiworldNews/TA): ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ನಡೆದ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವದ ವೇಳೆ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಳ್ಳಿಯರು ಎಗರಿಸಿರುವ ಘಟನೆ ನಡೆದಿದೆ. ಮೂವರು ಮಹಿಳಾ ಕಳ್ಳಿಯರು ನಡೆಸಿದ ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಹೆಜಮಾಡಿ ನಿವಾಸಿ ಕಮಲ ಎಂಬುವವರು ಪೂಜೆಯಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭ, ಮೂವರು ಕಳ್ಳಿಯರು ಅವರನ್ನು ಮೂರು ಕಡೆಯಿಂದ ಸುತ್ತುವರಿದು, ಗಂಟೆ ಹೊಡೆಯುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಚತುರತೆಯಿಂದ ಕದ್ದು ಪರಾರಿಯಾಗಿದ್ದಾರೆ.
ಕಳ್ಳತನವಾದ ಚಿನ್ನದ ಸರದ ಮೌಲ್ಯ ಸುಮಾರು 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಘಟನೆ ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು, ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಸಂಬಂಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಕಳ್ಳಿಯರ ಬಂಧನಕ್ಕಾಗಿ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ. ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ವೇಳೆ ಭಕ್ತರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.