ಮಂಗಳೂರು, ಡಿ. 26 (DaijiworldNews/TA): ತುಳುನಾಡಿನಲ್ಲಿ ನೂರಾರು ದೈವಕ್ಷೇತ್ರಗಳು ಇವೆ. ಮಹಿಮಾನ್ವಿತ ಶಕ್ತಿಯ ಮೂಲಕ ಭಕ್ತ ಕೋಟಿ ಜನರನ್ನು ಸೆಳೆಯುತ್ತಿದೆ. ಅಂತಹ ಕ್ಷೇತ್ರಗಳ ಪೈಕಿ ಈ ಆಧುನಿಕ ಕಾಲದಲ್ಲೂ ಚಮತ್ಕಾರ ಸೃಷ್ಟಿಸುತ್ತಿರುವ ಕ್ಷೇತ್ರ ಮಂಗಳೂರಿನ ಕಟೀಲು ಸಮೀಪದ ಶಿಬರೂರು ಎಂಬಲ್ಲಿರುವ ಶ್ರೀ ಕೊಡಮಣಿತ್ತಾಯ ದೈವಸ್ಥಾನ. ವರ್ಷಕ್ಕೊಂದು ಬಾರಿ ನಡೆಯುವ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವದ ಎಂಟು ದಿನಗಳ ಕಾಲ ಲಕ್ಷಾಂತರ ಜನ ಕ್ಷೇತ್ರಕ್ಕೆ ಆಗಮಿಸುತ್ತಾರೆ. ದೈವಸ್ಥಾನದ ಎದುರು ಇರುವ ಪವಿತ್ರ ಬಾವಿಯ ನೀರು ಎಲ್ಲರ ಶ್ರದ್ಧೆ ನಂಬಿಕೆಯ ಪ್ರತೀಕ..

ಪವಿತ್ರ ಬಾವಿಯ ನೀರು : ಅನಾದಿ ಕಾಲದಿಂದಲೂ ಕಾರಣಿಕ ಬೀರುತ್ತಿರೋ ಕ್ಷೇತ್ರದ ಬಾವಿ ನೀರು ಬಹಳ ವಿಶೇಷತೆ ಹೊಂದಿದೆ. ಇಂದಿಗೂ ಏತದ ಮೂಲಕವೇ ನೀರೆತ್ತುವ ಪದ್ಧತಿ ಇಲ್ಲಿ ಭಕ್ತರ ಮನಸೂರೆಗೊಳ್ಳುತ್ತೆ. ಈ ಬಾವಿಯ ನೀರನ್ನು ಭಕ್ತರಿಗೆ ತೆಗೆದು ನೀಡಲಾಗುತ್ತದೆ. ಪುರಾತನ ಕಾಲದಲ್ಲಿ ಸ್ಥಳೀಯ ದೈವೀ ವೈದ್ಯರಾದ ತ್ಯಾಂಪಣ್ಣ ಶೆಟ್ಟಿ ಎಂಬವರು ತನ್ನಲ್ಲಿದ್ದ ವಿಷ ಹೀರುವ ಕಲ್ಲೊಂದನ್ನು ಲೋಕದ ಜನತೆಯ ಒಳಿತಿಗಾಗಿ ಈ ಬಾವಿಗೆ ಹಾಕಿದ್ದಾರೆ ಎಂಬುವುದು ಈ ಬಾವಿ ಹಿಂದಿನ ಕಥೆ ಎಂದು ಹೇಳಲಾಗುತ್ತದೆ. ಹೀಗಾಗಿ ಆ ಶಕ್ತಿಯಿಂದಲೇ ಈ ಬಾವಿಯ ನೀರು ಯಾವುದೇ ರೀತಿಯ ವಿಷವನ್ನು ಹೀರಿಕೊಳ್ಳುತ್ತದೆ ಅನ್ನುವ ನಂಬಿಕೆ ಹಿಂದಿನ ಕಾಲದಿಂದ ಇಂದಿನವರೆಗೂ ಉಳಿದುಕೊಂಡು ಬಂದಿದೆ.
ಜಾತ್ರಾ ಮಹೋತ್ಸವದ 8 ದಿನದಲ್ಲಿ ಈ ದೈವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದು, ಈ ಪವಿತ್ರ ನೀರನ್ನು ಕೊಂಡೊಯ್ಯತ್ತಾರೆ. ಈ ನೀರನ್ನು ಕುಡಿಯುವುದರಿಂದ ವರ್ಷವಿಡೀ ದೇಹದಲ್ಲಿದ್ದ ವಿಷಕಾರಿ ಅಂಶಗಳು ಹೋಗುತ್ತದೆ. ಜೊತೆಗೆ ವಿಷಜಂತುಗಳು ಕಡಿದಂತ ಸಂದರ್ಭದಲ್ಲಿ ತಕ್ಷಣ ಈ ನೀರನ್ನು ಕುಡಿದು ನಂತರ ಈ ಕ್ಷೇತ್ರದಲ್ಲೇ ಸಿಗುವ ಮಣ್ಣನ್ನು ನೀರಲ್ಲಿ ಬೆರಸಿ ಗಾಯಕ್ಕೆ ಹಚ್ಚಿದರೆ ವಿಷ ಹೊರತೆಗೆಯುತ್ತದೆ ಅನ್ನುವ ನಂಬಿಕೆ ಇಂದಿಗೂ ಉಳಿದಿದೆ.
ದೈವೀ ಪವಾಡ : ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಚಿತ್ರ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ಖ್ಯಾತ ನಾಮರು ಕೊಡಮಣಿತ್ತಾಯನ ಪರಮ ಭಕ್ತರು ಆಗಿದ್ದಾರೆ. ಈ ಕ್ಷೇತ್ರದ ದೈವೀ ಪವಾಡ ಬಗ್ಗೆ ಹಲವು ವೇದಿಕೆಗಳಲ್ಲಿ ಈ ಗಣ್ಯರು ಹೇಳಿಕೊಂಡಿದ್ದಾರೆ. ನಾನಾ ಊರುಗಳಿಂದ ಬರುವ ಭಕ್ತರು ಈ ಆಧುನಿಕ ಯುಗದಲ್ಲೂ ಈ ನಂಬಿಕೆಯನ್ನು ಇಟ್ಟು ನೀರು ಹಾಗೂ ಮಣ್ಣನ್ನು ಕೊಂಡೊಯ್ಯಲು ಮುಗಿ ಬೀಳುತ್ತಾರೆ. ಸಂತಾನ ಭಾಗ್ಯ, ಕಂಕಣ ಭಾಗ್ಯ ಸೇರಿದಂತೆ ಅನಾರೋಗ್ಯ ಹೊಂದಿದ ಜನರು ಶಿಬರೂರು ಕ್ಷೇತ್ರಕ್ಕೆ ಆಗಮಿಸಿ ಇಲ್ಲಿ ಪ್ರಸಾದ ಸ್ವೀಕರಿಸಿದ ಬಳಿಕ ಜೀವನದಲ್ಲಿ ಅಮೂಲಾಗ್ರ ಬದವಾವಣೆಯನ್ನು ಕಂಡಿರೋದು ವಿಶೇಷ.
ಒಂದು ವರ್ಷಗಳ ಕಾಲ ಶಕ್ತಿ ಈ ಪವಿತ್ರ ನೀರಿಗೆ ಒಂದು ವರ್ಷಗಳ ಕಾಲ ಶಕ್ತಿ ಇರುತ್ತದೆ. ಹೀಗಾಗಿ ಪ್ರತಿ ವರ್ಷವೂ ಹೊಸ ನೀರನ್ನು ಹಾಗೂ ಮಣ್ಣನ್ನು ಕೊಂಡೊಯ್ಯಲು ಭಕ್ತರು ಜಾತ್ರಾ ಸಂದರ್ಭದಲ್ಲಿ ಇಲ್ಲಿಗೆ ಬರುತ್ತಾರೆ. ಇಂದಿಗೂ ಹಳ್ಳಿ ಪ್ರದೇಶದ ಜನ ವಿಷ ಜಂತುಗಳ ಕಡಿತಕ್ಕೊಳಗಾದರೆ ಮೊದಲು ಈ ನೀರು ಹಾಗೂ ಮಣ್ಣು ಸೇವಿಸಿ ಬಳಿಕ ಇನ್ನಿತರ ಚಿಕಿತ್ಸೆಗೆ ಹೋಗುತ್ತಾರೆ. ಅಷ್ಟರೊಳಗೆ ಅವರ ಮೈ ಮೇಲಿದ್ದ ವಿಷ ಇಳಿದಿರುತ್ತದೆ.
ತುಳುವಿನಲ್ಲಿ ಒಂದು ಮಾತಿದೆ.."ತಿಗಲೆ ಇತ್ತಿನಾಯಗ್ ತಿಬಾರ್" ಅನ್ನೋದು. ಅಂದ್ರೆ ತೀರಾ ಹಳ್ಳಿ ಪ್ರದೇಶವಾದ ಶಿಬರೂರು ಗೆ ಈ ಹಿಂದೆ ಬಸ್ ಸಂಪರ್ಕ ಇರಲಿಲ್ಲ. ಜಾತ್ರೆಯ ಆಮಂತ್ರಣವೂ ತಲುಪಿಸುವ ವ್ಯವಸ್ಥೆ ಇರಲಿಲ್ಲ. ಆದ್ರೆ ಧನು ಸಂಕ್ರಮಣ ಬಂದ್ರೆ ಶಿಬರೂರು ಜಾತ್ರೆ ಅನ್ನೋದು ಎಷ್ಟರ ಮಟ್ಟಿಗೆ ಜನಜನಿತ ಅಂದ್ರೆ ಅದೇ ದಿನ ಸಾವಿರಾರು ಜನ ಶಿಬರೂರು ಕ್ಷೇತ್ರಕ್ಕೆ ಆಗಮಿಸುತ್ತಿದ್ರು. ಜನ ಲಕ್ಷಾಂತರ ಸಂಖ್ಯೆಯಲ್ಲಿ ನೆರವೇರುವ ಕಾರಣ ಶಿಬರೂರುಗೆ ಹೋಗಬೇಕಾದ್ರೆ ಹೃದಯ ಗಟ್ಟಿ ಇರಬೇಕು ಎಂಬ ಮಾತಿತ್ತು. ಒಟ್ಟಿನಲ್ಲಿ ಈಗಿನ ಕಾಲದಲ್ಲೂ ಇಂತಹ ನಂಬಿಕೆ ಉಳಿಯಬೇಕಿದ್ದರೆ ಈ ಕ್ಷೇತ್ರದಲ್ಲಿ ಹಾಗೂ ಬಾವಿಯಲ್ಲಿ ದೈವಿ ಶಕ್ತಿ ಇದೆ ಅನ್ನೋದರಲ್ಲಿ ಸಂದೇಹವಿಲ್ಲ.