ಪುತ್ತೂರು,ಡಿ. 24 (DaijiworldNews/AK): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಮುಂದಿನ 3 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ಸುಧಾಕರ ಸುವರ್ಣ ಅವಿರೋಧ ಆಯ್ಕೆಯಾಗಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಸಿ.ಶೇ. ಕಜೆಮಾರ್ ಅವಿರೋಧ ಆಯ್ಕೆಯಾಗಿದ್ದಾರೆ. ಬುಧವಾರ ಪುತ್ತೂರು ಪತ್ರಿಕಾ ಭವನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
ಜಿಲ್ಲಾ ಸಂಘದ ಕೋಶಾಧಿಕಾರಿ ವಿಜಯ ಕೋಟ್ಯಾನ್ ಪಡು ಚುನಾವಣಾಧಿಕಾರಿಯಾಗಿದ್ದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ಹಿಂದೆಗೆತ ಪ್ರಕ್ರಿಯೆ ನಡೆಸಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳನ್ನು ಘೋಷಿಸಲು ಡಿ.28 ಬುಧವಾರ ನಿಗದಿ ಮಾಡಲಾಗಿತ್ತು. ಅಗತ್ಯವಿದ್ದರೆ ಡಿ.28ರಂದು ಚುನಾವಣೆ ನಡೆಸಲು ನಿಗದಿ ಮಾಡಲಾಗಿತ್ತು. ಎಲ್ಲ ಹುದ್ದೆಗಳಿಗೂ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಿ ಪ್ರಮಾಣಪತ್ರ ವಿತರಿಸಿದರು.
ಉಪಾಧ್ಯಕ್ಷರಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಕರುಣಾಕರ ರೈ ಸಿ.ಎಚ್., ಉದಯವಾಣಿ ಪತ್ರಿಕೆಯ ಉಪ್ಪಿನಂಗಡಿ ವರದಿಗಾರ ಎಂ.ಎಸ್. ಭಟ್ ಆಯ್ಕೆಯಾದರು. ಆಡಳಿತ ಮಂಡಳಿಯ ಎಲ್ಲ 15 ಸದಸ್ಯರಿಗೆ ಚುನಾವಣಾಧಿಕಾರಿಗಳು ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಸಂಘದ ಇಡೀ ತಂಡವನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಪುತ್ತೂರಿನ ಪತ್ರಕರ್ತರು ಇಡೀ ಸಮಾಜಕ್ಕೆ ಉತ್ತಮ ನಿದರ್ಶನ ತೋರಿಸಿದ್ದಾರೆ ಎಂದವರು ನುಡಿದರು.
ನಿರ್ಗಮನ ಅಧ್ಯಕ್ಷ ಸಿದ್ದಿಕ್ ನೀರಾಜೆ ಮತ್ತು ನಿರ್ಗಮನ ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ಅಭಿನಂದಿಸಿ ಮಾತನಾಡಿದರು. ಹೊಸ ತಂಡದ ಪರವಾಗಿ ನೂತನ ಅಧ್ಯಕ್ಷ ಸುಧಾಕರ ಸುವರ್ಣ ಮತ್ತು ನೂತನ ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ಅವರು ಎಲ್ಲ ಮತದಾರ ಸದಸ್ಯರಿಗೆ ಮತ್ತು ಆಯ್ಕೆಯಾದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.