ಮಂಗಳೂರು/ಉಡುಪಿ, ಡಿ. 24 (DaijiworldNews/AA): ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ವತಿಯಿಂದ ನೀಡುವ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಇಬ್ಬರು ಸಾಧಕಿಯರು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೊರಗರ ಡೋಲು ವಾದಕಿ ಸುಮತಿ ಕೊರಗ ಮತ್ತು ಉಡುಪಿ ಜಿಲ್ಲೆಯ ನಾಟಿ ವೈದ್ಯೆ ಗುಲಾಬಿ ಗೌಡ್ತಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

ಹೆಬ್ರಿಯ ನಾಟಿ ವೈದ್ಯೆ ಗುಲಾಬಿ ಗೌಡ್ತಿ
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ ಮಲೆಕುಡಿಯ ಸಮುದಾಯದ 89 ವರ್ಷದ ಗುಲಾಬಿ ಗೌಡ್ತಿ ಅವರು ಬಾಲ್ಯದಿಂದಲೇ ನಾಟಿ ವೈದ್ಯ ಪದ್ಧತಿಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಅಂದಿನ ಕಾಲದಲ್ಲಿ ಶಿಕ್ಷಣದ ಅರಿವಿನ ಕೊರತೆ ಮತ್ತು ಬಡತನದ ಕಾರಣದಿಂದ ಅವರು ಶಾಲೆಯ ಮೆಟ್ಟಿಲು ಹತ್ತಲು ಸಾಧ್ಯವಾಗಲಿಲ್ಲ. ಆದರೆ, ಕಳೆದ 50 ವರ್ಷಗಳಿಂದ ಅವರು ಕಾಡಿನ ಗಿಡಮೂಲಿಕೆಗಳು, ಬೇರು, ತೊಗಟೆ ಮತ್ತು ಬಳ್ಳಿಗಳನ್ನು ಸಂಗ್ರಹಿಸಿ ಸಾಂಪ್ರದಾಯಿಕ ಔಷಧಗಳನ್ನು ತಯಾರಿಸುವ ಮೂಲಕ ಜನಸೇವೆಯಲ್ಲಿ ತೊಡಗಿದ್ದಾರೆ.
ಜೊತೆಗೆ ಗುಲಾಬಿ ಗೌಡ್ತಿ ಅವರು ಹೆರಿಗೆ ಮಾಡಿಸುವಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಉಗುರು ಸುತ್ತು, ಕೂದಲು ಉದುರುವಿಕೆ, ಹಾವಿನ ಕಡಿತ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಕಾಯಿಲೆಗಳಿಗೆ ಇವರು ಸಾಂಪ್ರದಾಯಿಕ ಚಿಕಿತ್ಸೆ ನೀಡುವಲ್ಲಿ ಪ್ರಸಿದ್ಧರಾಗಿದ್ದಾರೆ.
ಡೋಲು ವಾದಕಿ ಸುಮತಿ ಕೊರಗ
ಮೂಲ್ಕಿ ಸಮೀಪದ ಕಕ್ವ ಮೂಲದ ಸುಮತಿ ಕೊರಗ ಅವರು 5ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದಾರೆ. ಬುಟ್ಟಿ ಹೆಣೆಯುವುದು ಇವರ ಕುಟುಂಬದ ಕುಲ ಕಸುಬು ಆಗಿದೆ. ಕಿನ್ನಿಗೋಳಿ ಸಮೀಪದ ಮೆನ್ನಾಬೆಟ್ಟುವಿನ ಕೆಮ್ಮಡೆ ಶ್ಯಾಮ ಕೊರಗ ಅವರನ್ನು ವಿವಾಹವಾಗಿರುವ ಅವರು, ಅಂದಿನಿಂದ ಅಲ್ಲಿಯೇ ನೆಲೆಸಿದ್ದಾರೆ.
ಬಾಲ್ಯದಲ್ಲಿಯೇ ಡೋಲು ವಾದನ ಕಲಿತ ಸುಮತಿ ಅವರು, ನಂತರದ ದಿನಗಳಲ್ಲಿ ಪ್ರಸಿದ್ಧ ಡೋಲು ಕಲಾವಿದೆಯಾಗಿ ಗುರುತಿಸಿಕೊಂಡರು. ಅವರು ಮುಂಬೈ, ಚೆನ್ನೈ ಮತ್ತು ಪುಣೆ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ.
ಮಂಗಳೂರಿನ 'ಕೊರಲ್ ಕಲಾ ತಂಡ'ದ ಸದಸ್ಯೆಯಾಗಿ ಸುಮಾರು 12 ವರ್ಷಗಳ ಕಾಲ ಡೋಲು ಕಲಾವಿದೆಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸಮುದಾಯದ ಸಾಂಪ್ರದಾಯಿಕ ನೃತ್ಯ ಮತ್ತು ವೃತ್ತಿ ಕೌಶಲಗಳ ಬಗ್ಗೆ ವಿವಿಧ ವೇದಿಕೆಗಳಲ್ಲಿ ಪ್ರಾತ್ಯಕ್ಷತೆಗಳನ್ನು ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.