ಉಳ್ಳಾಲ, ಡಿ. 23(DaijiworldNews/TA): ತಲಪಾಡಿ ಗ್ರಾಮದ ಕೆ.ಸಿ ರೋಡ್ ಫಲಾಹ್ ಶಾಲಾ ಬಸ್ಸು ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಎಮ್ ಡಿಎಮ್ಎ ಕ್ರಿಸ್ಟಲ್ ಎಂಬ ಮಾದಕ ವಸ್ತುವನ್ನು ಮಾರಾಟದಲ್ಲಿ ತೊಡಗಿದ್ದ ಕೇರಳದ ಉಪ್ಪಳ, ಮಂಗಲ್ಪಾಡಿ ನಿವಾಸಿ ಶೇಖ್ ಮೊಹಮ್ಮದ್ ಕೈಫ್ (22)ಎಂಬಾತನನ್ನು ಉಳ್ಳಾಲ ಪೊಲೀಸರು ಸೋಮವಾರದಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು ,ಕೃತ್ಯದಲ್ಲಿ ತೊಡಗಿದ್ದ ಮತ್ತಿಬ್ಬರು ಪೆಡ್ಲರ್ ಗಳು ಪರಾರಿಯಾಗಿದ್ದಾರೆ.

ಬಂಧಿತ ಆರೋಪಿ ಮೊಹಮ್ಮದ್ ಕೈಫ್ ನಿಂದ 55,000/- ರೂಪಾಯಿ ಬೆಲೆ ಬಾಳುವ ನಿಷೇಧಿತ 11 ಗ್ರಾಂ ಎಮ್ ಡಿಎಮ್ಎ ಕ್ರಿಸ್ಟಲ್ ಮತ್ತು ಕೃತ್ಯಕ್ಕೆ ಬಳಸಿದ್ದ 1 ತೂಕ ಮಾಪನ,500 ರೂ.ನಗದು ಮತ್ತು 1 ಮೊಬೈಲ್ ಫೋನನ್ನು ಪೊಲೀಸರು ಜಪ್ತಿಗೊಳಿಸಿದ್ದಾರೆ.ಸ್ಥಳದಲ್ಲಿದ್ದ ಮತ್ತಿಬ್ಬರು ಡ್ರಗ್ ಪೆಡ್ಲರ್ ಗಳಾದ ಶಮೀರ್ ಕಾಂಬ್ಳೆ ಮತ್ತು ಜಾವೀದ್ ಎಂಬವರು ಪರಾರಿಯಾಗಿದ್ದಾರೆ.
ಮೊಹಮ್ಮದ್ ಕೈಫ್ ಎಂಬಾತನು ವಿಲಾಸಿ ಜೀವನ ನಡೆಸಲು ಉಪ್ಪಳದ ಶಮೀರ್ ಕಾಂಬ್ಳೆ ಮತ್ತು ಜಾವೀದ್ ಎಂಬವರೊಂದಿಗೆ ಸೇರಿ ಕೆಸಿ ರೋಡ್ ಫಲಾಹ್ ಶಾಲಾ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಎಮ್ ಡಿಎಮ್ಎ ಕ್ರಿಸ್ಟಲನ್ನು ಪೂರೈಸುತ್ತಿದ್ದನೆನ್ನಲಾಗಿದೆ.ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಶಮೀರ್ ಕಾಂಬ್ಳೆ ಮತ್ತು ಜಾವೀದ್ ಬೈಕಲ್ಲಿ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಶೇಖ್ ಮೊಹಮ್ಮದ್ ಕೈಫ್ ನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.