ಮಂಗಳೂರು, ಡಿ. 22 (DaijiworldNews/TA): ಕರಾವಳಿ ಉತ್ಸವ ಅಂಗವಾಗಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜನಿಸಿದ ಹುಲಿ ಮರಿಗಳನ್ನು ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆಗೆ ಬಿಡುಗಡೆ ಮಾಡುವ ಹಾಗೂ ದತ್ತು ಯೋಜನೆಗೆ ದ.ಕ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಶ್ರೀಂಗೇರಿ ಮತ್ತು ಹರಿಹರಪುರದಲ್ಲಿ ಕಳೆದ ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು. ಆ ಸಮಯದಲ್ಲಿ ಹಳೆಯ ನಂಬಿಕೆಗಳು ಹೆಚ್ಚಾಗಿ ಪ್ರಾಬಲ್ಯ ಹೊಂದಿದ್ದವು ಎಂದು ಅವರು ನೆನಪಿಸಿಕೊಂಡರು. ಹುಲಿಗಳು ಹಿಂದಿನಿಂದಲೇ ದಾಳಿ ಮಾಡುತ್ತವೆ ಎಂಬ ನಂಬಿಕೆ ಇದ್ದುದಾಗಿ ಹೇಳಿದರು. ವಿದ್ಯುತ್ ಹಾಗೂ ಇತರ ಮೂಲಭೂತ ಸೌಲಭ್ಯಗಳ ಕೊರತೆಯಿದ್ದ ಅಲ್ಪವಿಕಸಿತ ಗ್ರಾಮಗಳಲ್ಲಿ ಆಗ ಹುಲಿ ದಾಳಿಗಳು ಹೆಚ್ಚಾಗುತ್ತಿದ್ದವು. ಈ ದಿನಗಳಲ್ಲಿ ಕಾಡಿನಲ್ಲಿ ಹುಲಿಯನ್ನು ನೋಡುವುದಕ್ಕೂ ಸಹ ಭಾಗ್ಯ ಬೇಕಾಗಿದೆ. ಡಿಜಿಟಲೀಕರಣದ ಯುಗದಲ್ಲಿ ‘ಹುಲಿಯನ್ನು ಉಳಿಸಿ’ (Save the Tiger) ಉಪಕ್ರಮಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ವೇಗ ಸಿಗಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಎರಡು ಹುಲಿ ಮರಿಗಳನ್ನು ದತ್ತು ಪಡೆದುದುಕೊಂಡಿರುವ ಕಾರ್ಡೊಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ನ ಪ್ರಧಾನ ವ್ಯವಸ್ಥಾಪಕ ದಿವಾಕರ್ ಕದ್ರಿ ಅವರು ಮಾತನಾಡಿ, ಹುಲಿ ಸಂರಕ್ಷಣೆಯ ವಿಷಯದಲ್ಲಿ ಕೇವಲ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದಕ್ಕಿಂತ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳುವ ಸಮಯ ಬಂದಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನರ್ವಾಡೆ ವಿನಾಯಕ ದರ್ಬಾರಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ ಅರುಣ್ ಕುಮಾರ್, ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಪ್ರಶಾಂತ್ ಪೈ, ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಮಂಜುನಾಥ್,ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಉಪ ಸಮಿತಿ ಅಧ್ಯಕ್ಷ ಶ್ರೀನಿಕೇತನ, ಅಧಿಕಾರಿಗಳಾದ ಕೆ ವಿ ರಾವ್, ಡಾ. ಅಶೋಕ್, ಡಾ. ದಿವ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.