ಬಂಟ್ವಾಳ, ಡಿ. 22 (DaijiworldNews/AA): ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೈಸೂರು ಸಂಸದ, ಮಹಾವೀರ ಶ್ರೀ ಯದುವೀರ ಕೃಷ್ಣದತ್ತ ಒಡೆಯರ್ ಅವರು ಭಾಗವಹಿಸಿದ್ದರು.





ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, "ಭಾರತೀಯತೆ ಶಿಕ್ಷಣದಿಂದ ಆಗಬೇಕು ಎನ್ನುವ ಪ್ರಧಾನಿಯವರ ವಿಕಸಿತ ಭಾರತದ ಕಲ್ಪನೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಾಕಾರಗೊಂಡಿದೆ. ಕ್ರೀಡೋತ್ಸವದ ಮೂಲಕ ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅದ್ಭುತವಾದ ಪ್ರದರ್ಶನ ನೀಡಿದ್ದಾರೆ ಇದು ಎಲ್ಲರಿಗೂ ಮಾದರಿ. ಧರ್ಮದ ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕರಾವಳಿ ಸಂಸ್ಕೃತಿಯ ಬೆನ್ನೆಲುಬು" ಎಂದು ಹೇಳಿದರು.
ಶ್ರೀರಾಮನ ವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾಸಂಸ್ಥೆಯ 3,900 ಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳು ಮೈನವಿರೇಳಿಸುವ ವಿವಿಧ ಶಾರೀರಿಕ ಭಂಗಿಗಳನ್ನು ಪ್ರದರ್ಶಿಸಿದರು.
ಶಿಶುನೃತ್ಯ, ಸಂಚಲನ, ಘೋಷ್ ಪ್ರದರ್ಶನ, ಜಡೆಕೋಲಾಟ, ನಿಯುದ್ಧ, ಯೋಗಾಸನ, ಪ್ರಾಥಮಿಕ ಸಾಮೂಹಿಕ, ನೃತ್ಯ ಭಜನೆ, ದೀಪಾರತಿ, ಮಲ್ಲಕಂಬ, ತಿರುಗುವ ಮಲ್ಲಕಂಬ, ನೃತ್ಯವೈವಿಧ್ಯ, ಚಕ್ರ ಸಮತೋಲನ, ಬೆಂಕಿ ಸಾಹಸ, ಕಾಲ್ಚಕ್ರ, ಕೂಪಿಕಾ ಸಮತೋಲನ, ಪ್ರೌಢ ಸಾಮೂಹಿಕ, ನಡೆಯಿತು. ಅಪರೇಷನ್ ಸಿಂಧೂರ, ಬ್ರಹ್ಮೋಸ್ ದಾಳಿ, ಅಯೋಧ್ಯ ಮಂದಿರದಲ್ಲಿ ಧ್ವಜಾರೋಹಣ ದೃಶ್ಯ ವಿಶೇಷ ಗಮನ ಸೆಳೆಯಿತು.
ಶಾಲೆಯ ಸಂಸ್ಥಾಪಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕ್ರೀಡೋತ್ಸವದಲ್ಲಿ ಸಂಸದ ಕ್ಯಾ. ಬೃಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್, ಹರೀಶ್ ಪೂಂಜ, ಮಂಗಳೂರು ರಾಮಕೃಷ್ಣ ಮಿಷನ್ ನ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಉಪಸ್ಥಿತರಿದ್ದರು.